ಭಾರತದ ಪ್ರತಿ ಮನೆಯಲ್ಲಿ ವರ್ಷಕ್ಕೆ ೫೦ಕೆಜಿ ಆಹಾರ ವ್ಯರ್ಥ! ವಿಶ್ವಸಂಸ್ಥೆಯಿಂದ ಶಾಕಿಂಗ್ ಮಾಹಿತಿ

ಇಂದಿಗೂ ಎಷ್ಟೋ ಜನಕ್ಕೆ ದಿನಕ್ಕೆ ಎರಡು ಹೊತ್ತು ಊಟ ಸಿಗುತ್ತಿಲ್ಲ. ಭಿಕ್ಷೆ ಬೇಡಿ ಕೆಲವರು ಅರೆ ಹೊಟ್ಟೆ ತುಂಬಿಸಿಕೊಂಡರೆ, ಇನ್ನೂ ಹಲವರಿಗೆ ತಿಂದು ಬಿಸಾಡಿದ ಆಹಾರವೇ ಅವರಿಗೆ ಮೃಷ್ಟಾನ್ನ, ಇನ್ನು ಕೆಲವರಿಗೆ ಅದೂ ಇಲ್ಲ. ಆದರೆ, ದಿನಕ್ಕೆ 3 – 4 ಹೊತ್ತು ಆಹಾರ ಸೇವಿಸುವವರು ಹೆಚ್ಚು ಆಹಾರ ವ್ಯರ್ಥ ಮಾಡುತ್ತಾರೆ. ಅದೆಷ್ಟು ಅಂತೀರಾ..? ವಿಶ್ವಸಂಸ್ಥೆಯ ವರದಿ ಪ್ರಕಾರ, 2019 ರಲ್ಲಿ ಜಾಗತಿಕವಾಗಿ 931 ದಶಲಕ್ಷ ಟನ್ ಆಹಾರ ವ್ಯರ್ಥವಾಗಿದೆ. ಇದು ಭೂಮಿಯನ್ನು ಏಳು ಬಾರಿ ಸುತ್ತುವಷ್ಟು ಸಾಕು ಎಂದು ಹೇಳುತ್ತದೆ. ಅಲ್ಲದೆ, ಭಾರತದಲ್ಲಿ ಮನೆಯ ಆಹಾರ ತ್ಯಾಜ್ಯವು ವರ್ಷಕ್ಕೆ ಸುಮಾರು 68.7 ಮಿಲಿಯನ್ ಟನ್ ಆಗಿದೆ ಎಂದು ತಿಳಿಸಿದೆ.

2019 ರಲ್ಲಿ ಸುಮಾರು 931 ದಶಲಕ್ಷ ಟನ್ ಆಹಾರ ತ್ಯಾಜ್ಯ ಉತ್ಪತ್ತಿಯಾಗಿದೆ. ಅದರಲ್ಲಿ ಶೇ. 61 ರಷ್ಟು ಮನೆಗಳಿಂದ, ಶೇ. 26 ರಷ್ಟು ಆಹಾರ ಸೇವೆಗಳಿಂದ ಮತ್ತು ಚಿಲ್ಲರೆ ವ್ಯಾಪಾರದಿಂದ ಶೇ. 13ರಷ್ಟಾಗಿದೆ. ಇದು ಒಟ್ಟು ಜಾಗತಿಕ ಆಹಾರ ಉತ್ಪಾದನೆಯಲ್ಲಿ ಶೇಕಡಾ 17ರಷ್ಟು ವ್ಯರ್ಥವಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) ಮತ್ತು ಪಾಲುದಾರ ಸಂಸ್ಥೆ ಡಬ್ಲ್ಯುಆರ್ ಪಿ ಜಂಟಿಯಾಗಿ ತಯಾರಿಸಿರುವ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ಹೇಳುತ್ತದೆ.

ಭಾರತದಲ್ಲಿ ಪ್ರತಿ ಮನೆಯ ಆಹಾರ ತ್ಯಾಜ್ಯ ಅಂದಾಜು ವರ್ಷಕ್ಕೆ ತಲಾ 50 ಕೆಜಿ ಅಥವಾ ವರ್ಷಕ್ಕೆ 68,760,163 ಟನ್ ಆಗಿದ್ದು, ಯುಎಸ್‌ನಲ್ಲಿ ಪ್ರತಿ ಮನೆಯ ಆಹಾರ ತ್ಯಾಜ್ಯ ಅಂದಾಜು ವರ್ಷಕ್ಕೆ 59 ಕೆಜಿ, ಅಥವಾ ವರ್ಷಕ್ಕೆ 19,359,951 ಟನ್ ಆಗಿದೆ. ಆದರೆ ಚೀನಾದಲ್ಲಿ ಪ್ರತಿ ಮನೆಯ ಅಂದಾಜು ವರ್ಷಕ್ಕೆ 64 ಕೆಜಿ ಅಥವಾ ವರ್ಷಕ್ಕೆ 91,646,213 ಟನ್ ಆಗಿದೆ. ಈ ತ್ಯಾಜ್ಯ ಬಹುಪಾಲು ಮನೆಗಳಿಂದ ಬಂದಿದೆ, ಅಂದ್ರೆ ಶೇ. 11 ರಷ್ಟು. ಆಹಾರ ಸೇವೆಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಕ್ರಮವಾಗಿ 5 ಮತ್ತು 2 ಶೇಕಡಾ ವ್ಯರ್ಥ ಮಾಡುತ್ತವೆ.

“ಹವಾಮಾನ ಬದಲಾವಣೆ, ಪ್ರಕೃತಿ ಮತ್ತು ಜೀವವೈವಿಧ್ಯತೆಯ ನಷ್ಟ, ಮತ್ತು ಮಾಲಿನ್ಯ ಮತ್ತು ತ್ಯಾಜ್ಯವನ್ನು ನಿಭಾಯಿಸುವ ಬಗ್ಗೆ ನಾವು ಗಂಭೀರವಾಗಿ ತಿಳಿದುಕೊಳ್ಳಲು ಬಯಸಿದರೆ, ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲು ವಿಶ್ವದಾದ್ಯಂತದ ವ್ಯವಹಾರಗಳು, ಸರ್ಕಾರಗಳು ಮತ್ತು ನಾಗರಿಕರು ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿದೆ” ಎಂದು ಯುಎನ್ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಯಂಡರ್ಸನ್ ಹೇಳಿದ್ದಾರೆ.

Exit mobile version