ನಿಲ್ಲದ ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್: ಡಿಕೆಶಿ ಕಾಲೆಳೆದ ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು

ಬೆಂಗಳೂರು, ಮಾ. 17: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಮುಂದುವರಿದಿದ್ದು, “ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ?” ಎಂದು ಬಿಜೆಪಿ ಮಾಡಿದ ಟ್ವೀಟ್‌ಗೆ ಕಾಂಗ್ರೆಸ್‌‌ ಟಾಂಗ್‌ ನೀಡಿದೆ.

ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟ ಮಾಜಿ ಪತ್ರಕರ್ತ ಭವಿತ್‌‌ ಹಾಗೂ ಮೈಸೂರಿನ ಸಂಸದ ಪ್ರತಾಪ್‌‌ ಸಿಂಹ ಅವರ ಫೋಟೋವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿ, ದೇಶದ್ರೋಹಿ ಹಾಗೂ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ?, ತೇಜಸ್ವಿ ಸೂರ್ಯ ಅವರಿಗೂ ಡ್ರಗ್ ಡೀಲರ್‌ಗೂ ಏನು ಸಂಬಂಧ?, ಪ್ರತಾಪ್‌ ಸಿಂಹ ಹಾಗೂ ಈ ಆರೋಪಿಗೂ ಏನು ಸಂಬಂಧ?, ಲಕ್ಷ್ಮಣ್‌ ಸವದಿ ಹಾಗೂ ಯುವರಾಜನಿಗೂ ಏನು ಸಂಬಂಧ?, ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು?” ಎಂದು ತಿರುಗೇಟು ನೀಡಿದೆ.

ಇದಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌, ಬಿಜೆಪಿಗೆ ಟಾಂಗ್‌ ನೀಡುವ ಭರದಲ್ಲಿ ವಿಚಾರಣೆಗೆ ಒಳಪಡಿಸಿದ ವ್ಯಕ್ತಿಯನ್ನು ಬಂಧಿತ ಎಂದು ಹೇಳುವ ಮುಖೇನ ಎಡವಟ್ಟು ಮಾಡಿಕೊಂಡಿತ್ತು. ಬಳಿಕ ಆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ ಕಾಂಗ್ರೆಸ್‌‌ ಮತ್ತೆ ಟ್ವೀಟ್‌‌ ಮಾಡುವ ಮೂಲಕ ಟಾಂಗ್‌ ನೀಡಿದೆ. ಹೊಸ ಟ್ವೀಟ್‌ನಲ್ಲಿ ಲಕ್ಷ್ಮಣ ಸವದಿ ಹಾಗೂ ಯುವರಾಜ ಸ್ವಾಮಿಯೊಂದಿಗೆ ಇರುವ ಫೋಟೋವನ್ನು ಸೇರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಗೂ ಸಿಡಿ ಪ್ರಕರಣದ ಮಾಸ್ಟರ್​ ಮೈಂಡ್​ ಎನ್ನಲಾದ ನರೇಶ್​ ಇಬ್ಬರೂ ಜೊತೆಗೆ ನಿಂತಿರುವ ಫೋಟೋವನ್ನು ಬಿಜೆಪಿ ಟ್ವೀಟ್ ಮಾಡಿತ್ತು.

“ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ಮಾಸ್ಟರ್‌ ಮೈಂಡ್ ಮತ್ತು ರಿಂಗ್‌ ಮಾಸ್ಟರ್ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ, ನನ್ನನ್ನು ಸಿಲುಕಿಸುವ ಕುತಂತ್ರ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ?” ಎನ್ನುವ ಬರಹದೊಂದಿಗೆ ಬಿಜೆಪಿ ಟ್ವೀಟ್‌ ಮಾಡಿತ್ತು.

Exit mobile version