ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ; ಜುಲೈ 31 ಕಡೆ ದಿನಾಂಕ, ಈ ಬಾರಿ ವಿಸ್ತರಣೆ ಇಲ್ಲ : ಆದಾಯ ತೆರಿಗೆ ಇಲಾಖೆ

IT Returns

2022ರ ಆದಾಯ ತೆರಿಗೆ ರಿಟರ್ನ್(ITR) ಸಲ್ಲಿಸುವ ಅಂತಿಮ ದಿನಾಂಕ ಸನಿಹದಲ್ಲಿದೆ. ಪ್ರತಿಯೊಬ್ಬ ತೆರಿಗೆದಾರರು(Tax Payers) ತಮ್ಮ ಐಟಿಆರ್ ಅನ್ನು ಕೊನೆಯ ದಿನಾಂಕದ ಮೊದಲು ಸಲ್ಲಿಸುವುದು ಮುಖ್ಯ, ಹಾಗೆ ಮಾಡಲು ವಿಫಲವಾದರೆ ದಂಡ ಪಾವತಿಸಬೇಕಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.

ಹಣಕಾಸು ವರ್ಷ 2021-22 ರಲ್ಲಿ ಹೆಚ್ಚಿನ ತೆರಿಗೆದಾರರಿಗೆ ITR ಸಲ್ಲಿಸಲು ಕೊನೆಯ ದಿನಾಂಕ ಜುಲೈ 31. ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲೇಬೇಕಾಗುತ್ತದೆ.

ಏಕೆಂದರೆ ಈ ಬಾರಿ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ(Income Tax Department) ಸ್ಪಷ್ಟಪಡಿಸಿದೆ.

ಅಧಿಕೃತ ಖಾತೆ ಮೂಲಕ ಟ್ವೀಟ್ ಮಾಡಿ ಜುಲೈ 22 ರಂದು ಈ ಬಗ್ಗೆ ತಿಳಿಸಿದೆ. ಜುಲೈ 31ರ ಅಂತಿಮ ದಿನಾಂಕದೊಳಗೆ ಹೆಚ್ಚಿನ ರಿಟರ್ನ್ಸ್ ಬರುವ ನಿರೀಕ್ಷೆಯಿರುವುದರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಈ ತಿಂಗಳ ಕೊನೆಯ ದಿನದಂದು ಆದಾಯ ತೆರಿಗೆ ಇಲಾಖೆ ಕನಿಷ್ಠ 1 ಕೋಟಿ ರಿಟರ್ನ್ಸ್ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ, ನಿಗದಿತ ಕೊನೆಯ ದಿನಾಂಕದಂದು ಸರ್ಕಾರವು 50 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್‌ಗಳನ್ನು ಸ್ವೀಕರಿಸಿತ್ತು. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಸರ್ಕಾರವು ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಸಲು ಗಡುವನ್ನು ಸ್ವಲ್ಪ ಕಾಲ ವಿಸ್ತರಿಸಿತ್ತು ಎಂಬುದನ್ನು ಗಮನಿಸಬಹುದು.

ಆದರೆ ಈ ಬಾರಿ ಗಡುವು ವಿಸ್ತರಣೆ ಮಾಡದಿರಲು ಇಲಾಖೆ ನಿರ್ಧರಿಸಿದೆ. 10,36,43,750 ವೈಯಕ್ತಿಕ ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, ಇದುವರೆಗೂ 3 ಕೋಟಿಗೂ ಹೆಚ್ಚು ಜನರು ತಮ್ಮ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ ಎಂದು ಇಲಾಖೆ ಟ್ವೀಟ್ ಮೂಲಕ ದೃಢಪಡಿಸಿದೆ.

“ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ರ ಗಡುವನ್ನು ವಿಸ್ತರಿಸಲು ಭಾರತ ಸರ್ಕಾರ ಪರಿಗಣಿಸುತ್ತಿಲ್ಲ’’ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್(Tarun Bajaj) ಕೂಡ ಸ್ಪಷ್ಟಪಡಿಸಿದ್ದಾರೆ.


ಇನ್ನು, ಐಟಿ ರಿಟರ್ನ್ಸ್(IT Returns) ಸಲ್ಲಿಕೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆ ಕಾಲಕಾಲಕ್ಕೆ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತೆರಿಗೆ-ವಿನಾಯತಿ ಮಿತಿಗಿಂತ ಹೆಚ್ಚು ಆದಾಯ ಗಳಿಸಿದವರು ನಿಯಮಗಳ ಪ್ರಕಾರ ನಿಗದಿತ ಐಟಿಆರ್ ನಮೂನೆಯಲ್ಲಿ ರಿಟರ್ನ್ಸ್ ಸಲ್ಲಿಸಬೇಕು.
ಇದರ ಫಾರ್ಮ್‌ಗಳು ಈಗಾಗಲೇ ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ಲಭ್ಯವಿದೆ. ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಹೊಸ ಫಾರ್ಮ್ ಅನ್ನು ಪ್ರಕಟಿಸಿದೆ. 
ನವೀಕರಿಸಲಾದ ಐಟಿಆರ್‌ ಫಾರ್ಮ್‌ನಲ್ಲಿ ತೆರಿಗೆ ಸಲ್ಲಿಸುವ ಉದ್ದೇಶವನ್ನು ಮತ್ತು ತೆರಿಗೆ ಸಲ್ಲಿಸಬೇಕಾದ ಆದಾಯದ ಮೊತ್ತವನ್ನು ಘೋಷಿಸಬೇಕಾಗುತ್ತದೆ.
Exit mobile version