ಭಾರತ-ಶ್ರೀಲಂಕಾ ಮೂರನೇ ಏಕದಿನ ಪಂದ್ಯ ಇಂದು: ಹ್ಯಾಟ್ರಿಕ್ ಗೆಲುವಿನತ್ತ ಭಾರತ ಚಿತ್ತ; ದೇವದತ್ ಪಡಿಕಲ್ ಆಡುವ ಸಾಧ್ಯತೆ

ಕೊಲಂಬೊ, ಜು. 23: ಪ್ರವಾಸಿ ಭಾರತ ಹಾಗೂ ಅತಿಥೇಯ ಶ್ರೀಲಂಕಾ ತಂಡಗಳ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಇಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈಗಾಗಲೇ ಸರಣಿಯ ಎರಡು ಪಂದ್ಯಗಳನ್ನು ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಭಾರತ ಇಂದಿನ ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೀಲಂಕಾ, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ತವರಿನಂಗಳದಲ್ಲಿ ಮಾನ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳ ನಡುವೆ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಯಲಿದೆ.

ತಂಡದಲ್ಲಿ ಬದಲಾವಣೆ ಸಾಧ್ಯತೆ
ಈಗಾಗಲೇ ಸರಣಿ ಗೆಲುವು ಸಾಧಿಸಿರುವ ಭಾರತ ಇಂದಿನ ಪಂದ್ಯಕ್ಕಾಗಿ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಹೊಸಬರಿಗೆ ಚಾನ್ಸ್ ಸಿಗಲಿದೆ. ಮುಖ್ಯವಾಗಿ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಬದಲಿಗೆ ಕನ್ನಡಿಗ ದೇವದತ್ ಪಡಿಕಲ್ ಅಥವಾ ಋತುರಾಜ್ ಗಾಯಕ್ವಾಡ್ ಕಣಕ್ಕಳಿಯುವ ನಿರೀಕ್ಷೆಯಿದೆ. ಮತ್ತೊಂದೆಡೆ ಇಶಾನ್ ಕಿಶನ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆಡಿಸುವ ಸಾಧ್ಯತೆ ಕೂಡ ಇದೆ.

ಬೌಲಿಂಗ್ ವಿಭಾಗದಲ್ಲೂ ಕೂಡ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಭುವನೇಶ್ವರ್ ಕುಮಾರ್ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದರೆ. ಕಳೆದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ದೀಪಕ್ ಚಹರ್ ಬದಲಿಗೆ ನವದೀಪ್ ಸೈನಿ ಅಥವಾ ಯುವ ಆಟಗಾರ ಚೇತನ್ ಸಕಾರಿಯಾ ಅವರನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ.

ಗೆಲುವಿನ ನಿರೀಕ್ಷೆಯಲ್ಲಿ ಲಂಕಾ ಸರಣಿಯಲ್ಲಿ ಎರಡು ಪಂದ್ಯ ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿರೋ ಶ್ರೀಲಂಕಾ, ಕೊನೆ ಪಂದ್ಯದಲ್ಲಿ ಗೆದ್ದು ಕಮ್ ಬ್ಯಾಕ್ ಮಾಡೋ ತವಕದಲ್ಲಿದೆ. ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗದಲ್ಲಿ ಇನ್ನಷ್ಟು ಬಲಿಷ್ಠ ಆಗಬೇಕಾದ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇಂದಿನ ಪಂದ್ಯಕ್ಕಾಗಿ ಶ್ರೀಲಂಕಾ ತಂಡದಲ್ಲೂ ಕೂಡ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ.

Exit mobile version