Tel Aviv: ದಕ್ಷಿಣ ಕೆಂಪು ಸಮುದ್ರದ ಮೂಲಕ ಭಾರತಕ್ಕೆ ಬರುತ್ತಿದ್ದ ಅಂತಾರಾಷ್ಟ್ರೀಯ ಸರಕು ಹಡಗನ್ನು ಯೆಮೆನ್ನ ಹೌತಿ (Yemen’s Houthis) ಉಗ್ರರ ಗುಂಪು ವಶಪಡಿಸಿಕೊಂಡಿದೆ ಎಂದು ಇಸ್ರೇಲ್ ಆರೋಪಿಸಿದೆ. ಟೆಲ್ ಅವಿವ್ (Tel Aviv) ಇದನ್ನು “ಇರಾನಿನ ಭಯೋತ್ಪಾದನಾ ಕೃತ್ಯ” ಮತ್ತು “ಜಾಗತಿಕ ಮಟ್ಟದಲ್ಲಿ ಅತ್ಯಂತ ಗಂಭೀರ ಘಟನೆ” ಎಂದು ಆರೋಪಿಸಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಇಸ್ರೇಲ್ನ (Israel) ಪ್ರಧಾನಮಂತ್ರಿ ಕಚೇರಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಬ್ರಿಟಿಷ್ ಒಡೆತನದ ಸರಕು ಹಡಗನ್ನು ಇರಾನ್ ಬೆಂಬಲಿತ ಹೌತಿ ಉಗ್ರರು ವಶಪಡಿಸಿಕೊಂಡಿದ್ದಾರೆ. ಈ ಹಡಗಿನಲ್ಲಿ ಇಸ್ರೇಲಿಗಳು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮತ್ತೊಂದು ಇರಾನಿನ ಭಯೋತ್ಪಾದಕ ಕೃತ್ಯವಾಗಿದೆ, ಇದು ಮುಕ್ತ ಪ್ರಪಂಚದ ನಾಗರಿಕರ ವಿರುದ್ಧ ಇರಾನ್ನ (Iran) ಯುದ್ಧದಲ್ಲಿ ಉಲ್ಬಣಗೊಳ್ಳುವಿಕೆಯನ್ನು ಪ್ರತಿನಿಧಿಸುತ್ತದೆ.
ಜಾಗತಿಕ ಹಡಗು ಮಾರ್ಗಗಳ ಭದ್ರತೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾನೂನುಗಳನ್ನು ಇರಾನ್ ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿದೆ. ಇನ್ನು ಹೌತಿ ಉಗ್ರರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ನಾವು ಇಸ್ರೇಲಿ ಹಡಗನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಇಸ್ರೇಲ್ ತಿರಸ್ಕರಿಸಿದೆ. ಇನ್ನು ದಕ್ಷಿಣ ಕೆಂಪು ಸಮುದ್ರದಿಂದ ಹಡಗನ್ನು ಯೆಮೆನ್ ಬಂದರಿಗೆ ಕೊಂಡೊಯ್ಯಲಾಗಿದೆ. ನಾವು ಇಸ್ಲಾಮಿಕ್ (Islamic) ತತ್ವಗಳು ಮತ್ತು ಮೌಲ್ಯಗಳಿಗೆ ಅನುಗುಣವಾಗಿ ಹಡಗಿನ ಸಿಬ್ಬಂದಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹೌತಿ ಉಗ್ರರು ಹೇಳಿಕೊಂಡಿದ್ದಾರೆ.

ಇನ್ನು ಈ ಸರಕು ಹಡಗು ಬ್ರಿಟಿಷ್ ಕಂಪನಿಯ (British Company) ಒಡೆತನದಲ್ಲಿದೆ ಮತ್ತು ಜಪಾನಿನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ ಎಂದು ಹೇಳಲಾಗಿದ್ದು, ಹಡಗಿನಲ್ಲಿ ಉಕ್ರೇನಿಯನ್ (Ukrainian), ಬಲ್ಗೇರಿಯನ್, ಫಿಲಿಪಿನೋ ಮತ್ತು ಮೆಕ್ಸಿಕನ್ ಸೇರಿದಂತೆ ವಿವಿಧ ರಾಷ್ಟ್ರೀಯತೆಗಳ 25 ಸಿಬ್ಬಂದಿ ಇದ್ದಾರೆ ಎನ್ನಲಾಗಿದೆ. ಇನ್ನು ಇಸ್ರೇಲಿ ಕಂಪನಿಗಳ ಮಾಲೀಕತ್ವದ ಅಥವಾ ನಿರ್ವಹಿಸುವ ಅಥವಾ ಇಸ್ರೇಲಿ ಧ್ವಜವನ್ನು ಹೊತ್ತಿರುವ ಎಲ್ಲಾ ಹಡಗುಗಳನ್ನು ನಾವು ಗುರಿಯಾಗಿಸಿಕೊಳ್ಳುತ್ತೇವೆ ಎಂದು ಯೆಮೆನ್ನ ಹೌತಿ ಉಗ್ರರು ತಿಳಿಸಿದ್ದಾರೆ.
ಹೌತಿ ಉಗ್ರರು ಶಿಯಾ ಮುಸ್ಲಿಂ (Shia Muslim) ಸಂಘಟನೆಯಾಗಿದ್ದು, ಇದು 1990 ರ ದಶಕದಲ್ಲಿ ಉತ್ತರ ಯೆಮೆನ್ನಲ್ಲಿ ಹುಟ್ಟಿಕೊಂಡಿತು. ಇವರು ಸುನ್ನಿ ಪ್ರಾಬಲ್ಯದ ಸರ್ಕಾರವನ್ನು ವಿರೋಧಿಸುತ್ತಾರೆ. ಹೀಗಾಗಿಯೇ 2004 ರಿಂದ ಯೆಮೆನ್ ಸರ್ಕಾರದೊಂದಿಗೆ ಆರು ಯುದ್ಧಗಳನ್ನು ಮಾಡಿದ್ದಾರೆ. 2014 ರಲ್ಲಿ ಅವರು ಯೆಮನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡಿದ್ದಾರೆ. ಅಂದಿನಿಂದ, ಅವರು ಸೌದಿ ನೇತೃತ್ವದ ಸುನ್ನಿ ಅರಬ್ ರಾಜ್ಯಗಳ ಒಕ್ಕೂಟದ ವಿರುದ್ಧ ನಾಗರಿಕ ಯುದ್ಧವನ್ನು ನಡೆಸುತ್ತಿದ್ದಾರೆ. ಇವರಿಗೆ ಇರಾನ್ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ.