ಎರಡೂ ಕೈಗಳಿಲ್ಲದೆ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ವ್ಯಕ್ತಿ ವಿಕ್ರಮ್ ಅಗ್ನಿಹೋತ್ರಿ ; ಇವರ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿ!

vikram

ಇಂದೋರ್‌ನ(Indore) ವಿಕ್ರಮ್ ಅಗ್ನಿಹೋತ್ರಿ(Vikram Agnihotri) ಅವರು ಕೈಗಳಿಲ್ಲದೆ ಇದ್ದರೂ ಡ್ರೈವಿಂಗ್ ಲೈಸನ್ಸ್(Driving License) ಪಡೆದ ಮೊದಲ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ತಮ್ಮ ಪ್ರೇರಣಾದಾಯಕ ಭಾಷಣದಿಂದಲೇ ಜನಪ್ರಿಯತೆ ಪಡೆದಿರುವ ವಿಕ್ರಂ, ಡಿಎಲ್‌ ಪಡೆದಾಗ ಎಲ್ಲರೂ ಹುಬ್ಬೇರಿಸಿದ್ದರು. ಇವರು ಹುಟ್ಟು ಅಂಗವಿಕಲರಲ್ಲ, ವಿಕ್ರಂ ಅವರು ಬಾಲ್ಯದಲ್ಲಿ ವಿದ್ಯುತ್ ಅಪಘಾತದಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡಿದ್ದರು, ಆದರೂ ಇವರು ಎದೆಗುಂದದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಿದರು. ಡ್ರೈವಿಂಗ್ ಮಾತ್ರವಲ್ಲದೇ, ಈಜು, ಸ್ಕೇಟ್ ಮತ್ತು ಕಾನೂನು ಅಧ್ಯಯನವನ್ನೂ ಮಾಡಿದ್ದಾರೆ.

ಭಾರತದ ಮೋಟಾರು ವಾಹನ ಕಾಯಿದೆಯಲ್ಲಿ ಎರಡೂ ಕೈಗಳಿಲ್ಲದ ವಿಶೇಷಚೇತನರಿಗೆ ಡ್ರೈವಿಂಗ್ ಲೈಸನ್ಸ್ ಕೊಡಲು ಯಾವುದೇ ಅವಕಾಶವಿಲ್ಲದ ಕಾರಣ, ಇವರಿಗೆ ಡ್ರೈವಿಂಗ್ ಲೈಸೆನ್ಸ್ ಸುಲಭವಾಗೇನೂ ಸಿಕ್ಕಿಲ್ಲ. ಯಾವ ಡ್ರೈವಿಂಗ್ ಸ್ಕೂಲ್ ಕೂಡ ಇವರಿಗೆ ಡ್ರೈವಿಂಗ್ ಕಲಿಸಲು ಒಪ್ಪದ ಕಾರಣ, ಯೂಟ್ಯೂಬ್‌ನಿಂದಲೇ ಇವರು ಡ್ರೈವಿಂಗ್ ಕಲಿತಿದ್ದಾರೆ. ಚಾಲನಾ ಪರವಾನಿಗೆ ಪಡೆಯಲು ಇರುವ ಕಾಯಿದೆಯನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಕ್ರಮ್ ಅವರು ಕಾರ್‌ ಓಡಿಸಲು ಚಾಲಕನನ್ನು ನೇಮಿಸಿಕೊಂಡಿದ್ದರು.

ಎಲ್ಲ ಸಮಯದಲ್ಲೂ ಬೇರೊಬ್ಬರನ್ನು ಅವಲಂಬಿಸಲು ಸಾಧ್ಯವಾಗದ ಕಾರಣ ಇವರೇ ಕಾರು ಓಡಿಸಲು ಪ್ರಾರಂಭಿಸಿದರು. ಇವರ ಬಳಿ ಆಟೋಮ್ಯಾಟಿಕ್‌ ಗೇರ್‌ ಶಿಫ್ಟ್‌ ಕಾರ್‌ ಇದ್ದು, ಬಲಗಾಲಿನಲ್ಲಿ ಸ್ಟೇರಿಂಗ್‌, ಎಡಗಾಲಿನಲ್ಲಿ ಆಕ್ಸಿಲರೇಟರ್‌ ನಿಯಂತ್ರಿಸುತ್ತಾರೆ.
2015 ಅಕ್ಟೋಬರ್‌ನಲ್ಲಿ ವಿಕ್ರಂ ಕಾಯಂ ಪರವಾನಗಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೈಯಲ್ಲಿ ಸಿಗ್ನಲ್ ನೀಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಇವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಗ್ವಾಲಿಯರ್‌ನ ಸಾರಿಗೆ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದಾಗ ತಾಂತ್ರಿಕ ಕಾರಣ ನೀಡಿ, ಮನವಿ ನಿರಾಕರಿಸಲಾಗಿತ್ತು.

ವಿಶೇಷ ಚೇತನರಿಗೆ ತಕ್ಕಂತೆ ಕಾರಿನ ವಿನ್ಯಾಸ ಇಲ್ಲ ಎಂಬ ಕಾರಣ ನೀಡಲಾಗಿತ್ತು. ಬಳಿಕ ಕಾರನ್ನು ವಿಕ್ರಂ ತಮಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೂಡ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ಎಲ್ಲ ಪ್ರಯತ್ನಗಳ ನಂತರ ಸೆಪ್ಟೆಂಬರ್‌ 30 ರಂದು ವಿಕ್ರಂಗೆ ಚಾಲನಾ ಪರವಾನಗಿ ದೊರೆಯಿತು. ಡ್ರೈವಿಂಗ್ ಲೈಸನ್ಸ್ ಹೊಂದಿದ್ದ ವಿಕ್ರಂ 2015 ಮೇ ಇಂದ 2016 ಸೆಪ್ಟೆಂಬರ್‌ವರೆಗೆ ಇಂದೋರ್‌ನಲ್ಲಿ ಸುಮಾರು 14,500 ಕಿ.ಮೀ ಕಾರು ಓಡಿಸಿದ್ದು,

ಯಾವುದೇ ಅಪಘಾತ ಸಂಭವಿಸಿಲ್ಲ ಎಂಬುದು ಗಮನಾರ್ಹ ಅಂಶ. ಸದ್ಯ ಗ್ಯಾಸ್‌ ಏಜೆನ್ಸಿ ನಡೆಸುತ್ತಿರುವ ವಿಕ್ರಂ ಅವರ ಜೀವನ ಪ್ರತಿಯೊಬ್ಬ ವಿಶೇಷ ಚೇತನರಿಗೂ ಪ್ರೇರಣೆಯಾಗಿದೆ.

Exit mobile version