ಆಸಕ್ತ ಶಾಸಕರು ಜಿಲ್ಲಾಧಿಕಾರಿಗಳ ಜೊತೆ ಗ್ರಾಮ ವಾಸ್ತವ್ಯ ಮಾಡಬಹುದು: ಸಚಿವ ಆರ್ ಅಶೋಕ್

ಬೆಂಗಳೂರು, ಮಾ. 17: ಜನರಿಂದ ಓಟು ಪಡೆದು ಹೋದರೆ ಜನರ ಕಷ್ಟಗಳತ್ತ ತಿರುಗಿ ನೋಡದ ಅನೇಕ ಶಾಸಕರು ಇದೀಗ ತಾವೇ ಗ್ರಾಮ ವಾಸ್ತವ್ಯ ಹೂಡಲು ಮುಂದಾಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಜನರ ಕುಂದು ಕೊರತೆಗಳನ್ನು ನೀಗಿಸಲು ಕಂದಾಯ ಇಲಾಖೆ ಕೈಗೊಂಡಿರುವ ‘ಅಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆ’ ಎಂಬ  ಕಾರ್ಯಕ್ರಮಕ್ಕೆ ಶಾಸಕರಿಗೆ ಕೂಡಾ  ಮಾಹಿತಿ ನೀಡುವುದರ ಜೊತೆಗೆ ಗ್ರಾಮ ವಾಸ್ತವ್ಯಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸುತ್ತಿದ್ದು ಅದರ ಲಾಭ ಕೇವಲ  ಅಧಿಕಾರಿಗಳಿಗೆ ಮಾತ್ರ ಸಿಗುತ್ತದೆ, ನಮಗೇನು ಸಿಗುವುದಿಲ್ಲ , ಹೀಗಾಗಿ ನಾವು ಕೂಡ ಗ್ರಾಮ ವಾಸ್ತವ್ಯ ಮಾಡುತ್ತೇವೆ ಎಂದು ಸದನದಲ್ಲಿ ಶಾಸಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆ’ ಉತ್ತಮ ಕಾರ್ಯಕ್ರಮ. ಆದರೆ, ಶಾಸಕರೆಲ್ಲಿ  ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ನಮಗೂ ಗ್ರಾಮ ವಾಸ್ತವ್ಯಕ್ಕೆ ಅವಕಾಶ ನೀಡಬೇಕು ಎಂದು ಕೇಳಿದ್ದಾರೆ.

ಇದನ್ನು ಸಮ್ಮತಿಸಿದ ಅನ್ನದಾನಿ, ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ, ಡಾ. ರಂಗನಾಥ್ ಸೇರಿದಂತೆ ಹಲವು ಸದಸ್ಯರು, ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿಯನ್ನೇ ನೀಡದೆ ಅಧಿಕಾರಿಗಳು ಫಲಾನುಭವಿಗಳಿಗೆ ಹಕ್ಕು ಪತ್ರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರನ್ನು ಈ ಕಾರ್ಯಕ್ಕೆ ಜೊತೆಗೂಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕರಿಗೆ ಮಾಹಿತಿಯನ್ನೇ ನೀಡದೆ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು, ಶಾಸಕರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಸರಕಾರದ ಸೌಲಭ್ಯಗಳನ್ನು ಶಾಸಕರಿಂದ ವಿತರಣೆ ಮಾಡಿಸುವ ಬದಲು ಅವರೇ ವಿತರಣೆ ಮಾಡುತ್ತಿದ್ದಾರೆ. ಹೀಗಾದರೆ ನಾವು ಜನರಿಂದ ಆಯ್ಕೆಯಾಗಿರುವುದಕ್ಕೆ ಅರ್ಥವೇ ಇರುವುದಿಲ್ಲ ಎಂದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್ ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರ ಮುದ್ರಿಸದಂತೆ ಸೂಚಿಸಲಾಗಿದೆ. ಎಲ್ಲ ಜನಪ್ರತಿನಿಧಿಗಳಿಗೆ ಎಸ್‌ಎಂಎಸ್‌ ಸಂದೇಶ ಕಳುಹಿಸಲು ನಿರ್ದೇಶನ ನೀಡಿದ್ದೇನೆ. ಆಸಕ್ತಿ ಇರುವ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ  ಗ್ರಾಮ ವಾಸ್ತವ್ಯ ಮಾಡಬಹುದು’ ಎಂದು ಸ್ಪಷ್ಟಪಡಿಸಿದರು.

ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

Exit mobile version