ಅಂತಾರಾಷ್ಟ್ರೀಯ ಹುಲಿ ದಿನ: ಕಾಡಿನ ರಾಜನ ಅಳಿವು-ಉಳಿವು ಇರುವುದು ನಮ್ಮ ಕೈಯಲ್ಲೇ..

ಇಂದು ಅಂತಾರಾಷ್ಟ್ರೀಯ ಹುಲಿ ದಿನ. ಉಳಿದ ಜೀವಿಗಳಂತೆ ಹುಲಿಯೂ ಅಳಿವಿಂಚಿನತ್ತ ಸಾಗುತ್ತಿದೆ. ಇದನ್ನು ತಡೆಗಟ್ಟಿ, ಹುಲಿಗಳ ಸಂಕುಲವನ್ನು ಹೆಚ್ಚಿಸುವ ಉದ್ದೇಶದಿಂದ ಈ ಜುಲೈ ೨೯ನ್ನು ಪ್ರತಿದಿನ ಹುಲಿಗಳ ಸಂರಕ್ಷಣೆಗಾಗಿ ಮೀಸಲಿಡಲಾಗುತ್ತಿದೆ.

ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ. ಪ್ರಾಣಿ, ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಾಣಿ. ಆದರೆ ದುರಾದೃಷ್ಠಕರ ಸಂಗತಿಯೆಂದರೆ, ಇಂತಹ ಪ್ರಾಮುಖ್ಯತೆ ಪಡೆದಿರುವ ಈ ಪ್ರಾಣಿ ಇಂದು ವಿನಾಶದತ್ತ ಸಾಗುತ್ತಿದೆ. ಇದಕ್ಕೆ ಕಾರಣ ಬೇರಾರು ಅಲ್ಲ, ಭೂಮಂಡಲದ ಅತೀ ಬುದ್ಧಿವಂತ ಜೀವಿಯಾದ ನಾವೇ..

ಕಾಡುಗಳ ನಾಶ, ಕಾಂಕ್ರೀಟ್ ಕಾಡುಗಳ ನಿರ್ಮಾಣದಿಂದ ಹುಲಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಹುಲಿಗಳ ಬೇಟೆ, ಹುಲಿಯ ಭಾಗಗಳ ಅಕ್ರಮ ಮಾರಾಟವೂ ಒಂದು ಕಾರಣ. ಈಗಾಗಲೇ, ಬಾಲಿ ಟೈಗರ್, ಕ್ಯಾಸ್ಪಿಯನ್ ಟೈಗರ್, ಜವಾನ್ ಟೈಗರ್, ಮತ್ತು ಟೈಗರ್ ಹೈಬ್ರಿಡ್ಸ್ ಸೇರಿದಂತೆ ನಾಲ್ಕು ಜಾತಿಯ ಹುಲಿಗಳ ಸಂತತಿ ಅಳಿದುಹೋಗಿರುವುದು ಮನುಕುಲಕ್ಕೆ ಆಗಿರುವ ನಷ್ಟ.

ಅಂತಾರಾಷ್ಟ್ರೀಯ ಹುಲಿ ದಿನ ಹುಟ್ಟಿಕೊಂಡಿದ್ದು ಹೇಗೆ?:
ಹುಲಿಗಳು ಕೇವಲ ಹದಿಮೂರು ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುತ್ತಿರುವುದರಿಂದ ಜೊತೆಗೆ ಸಂಖ್ಯೆಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದನ್ನ ಮನಗಂಡ ರಾಷ್ಟ್ರಗಳು 2010 ರ ಜುಲೈ 29ರಂದು ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್‌ಬರ್ಗ್‌ ಟೈಗರ್‌ ಶೃಂಗಸಭೆಯಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಅದೇ ಅಂತಾರಾಷ್ಟ್ರೀಯ ಹುಲಿ ದಿನದ ಆಚರಣೆ. ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಲಿಗಳ ನೈಸರ್ಗಿಕ ಆವಾಸಸ್ಥಾನವನ್ನು ಕಾಪಾಡುವುದು ಈ ಒಪ್ಪಂದದ ಪ್ರಮುಖ ಅಂಶ. ಅಲ್ಲದೆ, 2022ರ ಅಂತ್ಯದ ವೇಳೆಗೆ ಹುಲಿ ಹೆಚ್ಚಾಗಿರುವ ಹುಲಿ ಜನಸಂಖ್ಯೆಯನ್ನು ದ್ವಿಗುಣವಾಗುವಂತೆ ಮಾಡುತ್ತೇವೆ ಎಂದು ವಿವಿಧ ದೇಶಗಳ ಪ್ರತಿನಿಧಿಗಳು ಘೋಷಣೆ ಕೂಡ ಮಾಡಿದ್ದು, ಈ ಪ್ರಕ್ರಿಯೆ ನಡೆಯುತ್ತಲೇ ಇದೆ.

ಅಂತಾರಾಷ್ಟ್ರೀಯ ಹುಲಿ ದಿನದ 2021 ಥೀಮ್:
“ಅವರ ಉಳಿವು ನಮ್ಮ ಕೈಯಲ್ಲಿದೆ” ಎನ್ನುವುದು ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನದ ಥೀಮ್‌ ಆಗಿದೆ. ಅಂದರೆ ಹುಲಿಗಳನ್ನು ಉಳಿಸುವ ಜವಾಬ್ದಾರಿ ನಮ್ಮದೇ, ಅಂದ್ರೆ ಮನುಷ್ಯರದ್ದೇ.. ಹುಲಿಗಳ ಆವಾಸಸ್ಥಾನಕ್ಕೆ ಯಾವುದೇ ಧಕ್ಕೆ ಉಂಟುಮಾಡದೇ, ಅವುಗಳ ಬದುಕುವ ಹಕ್ಕನ್ನು ಬಿಟ್ಟುಕೊಡಬೇಕು. ಇನ್ನು, ಕೊರೊನಾ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಆಚರಣೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು.

ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ:
World Wide Fund for Nature ಪ್ರಕಾರ ವಿಶ್ವದಲ್ಲಿ ಹುಲಿಗಳ ಸಂಖ್ಯೆ ಕಳೆದ 150 ವರ್ಷಗಳಲ್ಲಿ ಶೇ. 95ರಷ್ಟು ಕಡಿಮೆಯಾಗಿದೆ. ಅಂದ್ರೆ ಈಗ ಉಳಿದಿರುವುದು ಕೇವಲ ಶೇ.5ರಷ್ಟು ಹುಲಿಗಳು. ಈ ಸಂಖ್ಯೆ ಪ್ರಕೃತ್ತಿ ನಿಯಮಕ್ಕೆ ವಿರುದ್ಧವಾಗಿದೆ. ಸಂರಕ್ಷಿತಾ ಅರಣ್ಯ ಪ್ರದೇಶಗಳಲ್ಲಿರುವ ಹುಲಿಗಳ ಸಂತತಿ ಹೆಚ್ಚುತ್ತಿರುವುದು ಈ ಸಂಸ್ಥೆ ಗುರುತಿಸಿದೆ.

ಭಾರತದಲ್ಲಿ ಹುಲಿಗಳು ಹೆಚ್ಚಿರುವುದು:
ವಿಶ್ವದಲ್ಲಿ ಇದೀಗ 3900 ಹುಲಿಗಳಿದ್ದು, ಅವುಗಳಲ್ಲಿ 3000 ಭಾರತದಲ್ಲೇ ಇದೆ. ಅಂದ್ರೆ ಜಾಗತಿಕ ಹುಲಿ ಜನಸಂಖ್ಯೆಯಲ್ಲಿ ಭಾರತವು ಸುಮಾರು 70% ರಷ್ಟನ್ನು ಹೊಂದಿದ್ದು, ನಮ್ಮದೇ ಪಾಲು ಹೆಚ್ಚಿದೆ. ದೇಶದಲ್ಲಿ ಟೈಗರ್‌ ರಿಸರ್ವ್ಸ್ ಜಾರಿಯಲ್ಲಿರುವುದರಿಂದ ಮತ್ತು ಪರಿಸರ ಇಲಾಖೆಯ ಪ್ರಯತ್ನಗಳು ಜಾರಿಗೆ ಬರುತ್ತಿರುವುದರಿಂದ, ಭಾರತವು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ದಾರಿಯಲ್ಲಿದೆ.

ನಮ್ಮ ಕರ್ತವ್ಯವೇನು?:
ಹುಲಿಗಳು ನಮಗಲ್ಲದಿದ್ದರೂ, ಈ ಪ್ರಕೃತಿಗೆ ಅತ್ಯವಶ್ಯಕ. ಈ ಮೂಲಕ ಪರೋಕ್ಷವಾಗಿ ಮನುಕುಲಕ್ಕೆ ಸಹಾಯ ಆಗುತ್ತವೆ. ಆದ್ದರಿಂದ ಇದನ್ನು ರಕ್ಷಿಸುವ ಹೊಣೆಯನ್ನು ನಾವೇ ಹೊತ್ತುಕೊಳ್ಳಬೇಕು. ಕಾಡನ್ನು ನಾಶಮಾಡದೇ, ಅವುಗಳ ಜಾಗವನ್ನು ಅವುಗಳಿಗೇ ಬಿಟ್ಟುಕೊಡಬೇಕು. ಮನುಷ್ಯರ ದುರಾಸೆಯನ್ನ ಕಡಿಮೆ ಮಾಡಿಕೊಂಡರೆ, ಎಲ್ಲ ಜೀವಿಗಳಿಗೂ ಬದುಕಲು ಸಾಧ್ಯವಾಗುತ್ತದೆ ಎಂಬುದು ಅಕ್ಷರಶಃ ಸತ್ಯ. ಆದ್ದರಿಂದ ಯಾವುದೇ ಪ್ರಾಣಿ-ಪಕ್ಷಿಗಳಿಗೆ ಹಾನಿ ಮಾಡದೇ, ಅವುಗಳ ವಾಸಸ್ಥಾನವನ್ನು ಕಿತ್ತುಕೊಳ್ಳದೇ ನಾವು ಬದುಕಬೇಕು. ಎಲ್ಲರಿದ್ದರಷ್ಟೇ ಈ ಭೂಮಿ ಎಂಬುದನ್ನು ಎಂದಿಗೂ ಮರೆಯದೇ, ಹುಲಿ ರಕ್ಷಣೆಯಲ್ಲಿ ಎಲ್ಲರೂ ಕೈ ಜೋಡಿಸಬೇಕು.

Exit mobile version