ಅವಳಿ-ಜವಳಿ ಮಕ್ಕಳ ಬಗ್ಗೆ ನಿಮಗೆ ತಿಳಿಯದ ಆಸಕ್ತಿದಾಯಕ ವಿಷಯಗಳು ಇಲ್ಲಿದೆ ನೋಡಿ

ಒಂದು ಹೆಣ್ಣಿಗೆ ತನ್ನೊಳಗೆ ಜೀವವೊಂದು ಬೆಳೆಯುತ್ತಿದೆ ಎಂದು ತಿಳಿಯುತ್ತಿದ್ದಂತೆ ತಾಯಿಯಾಗುತ್ತಿದ್ದೇನೆ ಎನ್ನುವ ಸಂಭ್ರಮದಲ್ಲಿ ಪುಳಕಗೊಳ್ಳುತ್ತಾಳೆ. ಮನೆ ಮಂದಿ ಕೂಡ ನಮ್ಮ ಮನೆಗೆ ಮುದ್ದಾದ ಪುಟ್ಟ ಮಗು ಬರುತ್ತಿದೆ ಎಂದು ಖುಷಿ ಪಡುತ್ತಾರೆ. ಅದರಲ್ಲೂ ಹೊಟ್ಟೆಯಲ್ಲಿರುವುದು ಒಂದಲ್ಲ, ಎರಡು ಮಕ್ಕಳು ಎಂದು ತಿಳಿದರಂತೂ ಆ ಖುಷಿ ದುಪ್ಪಟ್ಟಾಗುತ್ತದೆ.


ಎರಡೂ ಹೆಣ್ಣು ಮಕ್ಕಳಾಗಿರಬಹುದಾ, ಗಂಡು ಮಕ್ಕಳಾಗಿರಬಹುದಾ, ಅಥವಾ ಒಂದು ಹೆಣ್ಣು, ಒಂದು ಗಂಡು ಮಗು ಹುಟ್ಟುತ್ತದೋ, ಹೀಗೆ ಹುಟ್ಟುವ ಮಕ್ಕಳ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಸಹಜ ಗರ್ಭಧಾರಣೆಯಾಗಿರುವವರಿಗಿಂತ, ಕೃತಕ ಗರ್ಭಧಾರಣೆ ಮಾಡಿಸಿಕೊಂಡವರಲ್ಲಿ ಅವಳಿ ಮಕ್ಕಳು(Twin Kids) ಹುಟ್ಟುವ ಸಾಧ್ಯತೆ ಹೆಚ್ಚು.

ಭಾರತದಲ್ಲಿ ಒಂದು ಸಾವಿರ ಹೆರಿಗೆಯಾದರೆ, ಅದರಲ್ಲಿ ಕನಿಷ್ಟ 4 ಜನರು ಅವಳಿ ಮಕ್ಕಳಿಗೆ ಜನ್ಮ ನೀಡಿರುತ್ತಾರೆ. ಕಳೆದ ಎರಡು ದಶಕಗಳಿಂದ ಇನ್‌ವಿಟ್ರೋಫರ್ಟಿಲಿಟಿ ಎಂದರೆ ಕೃತಕ ಗರ್ಭಧಾರಣೆ ಚಿಕಿತ್ಸೆಯಿಂದಾಗಿ ಅವಳಿ ಮಕ್ಕಳ ಸಂಖ್ಯೆಯಲ್ಲಿ ಶೇ. 30 ರಿಂದ 50 ರಷ್ಟು ಏರಿಕೆಯಾಗಿದೆ ಎನ್ನುವ ಅಂದಾಜಿದೆ.


ಇನ್ನು, ಅವಳಿ ಮಕ್ಕಳ ಗರ್ಭಧಾರಣೆ ಬಗ್ಗೆ ಹಲವಾರು ಆಸಕ್ತಿದಾಯಕ ವಿಷಯಗಳಿವೆ : ಅವಳಿ ಮಕ್ಕಳಲ್ಲಿ ಒಂದು ಮಗು ಮಾಯವಾಗುವುದು, ಇದನ್ನು ವ್ಯಾನಿಶಿಂಗ್ ಟ್ವಿನ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಕೆಲವರಿಗೆ ಮೊದಲ ಭಾರಿ ಪರೀಕ್ಷಿಸಿದಾಗ ಎರಡು ಮಕ್ಕಳಿದ್ದಾರೆ ಎಂದು ಹೇಳುತ್ತಾರೆ, ಆದರೆ ನಂತರದ ಸ್ಕ್ಯಾನಿಂಗ್ ಪರೀಕ್ಷೆಯಲ್ಲಿ ಒಂದು ಮಗು ಮಾತ್ರ ಕಾಣುತ್ತದೆ.

ಈ ರೀತಿಯ ಪ್ರಕರಣ ಶೇ. 10-15 ರಷ್ಟು ಕಂಡು ಬರುತ್ತದೆ. ಮೊದಲಿನ ಪರೀಕ್ಷೆಯಲ್ಲಿ ಎರಡು ಮಕ್ಕಳು ಇರಬಹುದು ಎಂದು ಹೇಳಿ, ಈಗ ಮತ್ತೊಂದು ಮಗು ಏನಾಯ್ತು ಎಂದು ಹೆಚ್ಚಿನವರಿಗೆ ಗೊಂದಲ ಉಂಟಾಗುತ್ತದೆ. ಇಲ್ಲಿ ಒಂದು ಅವಳಿ ಮತ್ತೊಂದು ಅವಳಿಯನ್ನು ತಿಂದಿರುತ್ತದೆ. ಇದನ್ನು ಮೆಡಿಕಲ್ ಭಾಷೆಯಲ್ಲಿ ವ್ಯಾನಿಶಿಂಗ್ ಟ್ವಿನ್ ಸಿಂಡ್ರೊಮ್ ಎಂದು ಕರೆಯುತ್ತಾರೆ.


ಅವಳಿ ಮಕ್ಕಳಲ್ಲಿ ಅವರದ್ದೇ ಆದ ಭಾಷೆ ಇರುತ್ತದೆ : ಅವಳಿ ಮಕ್ಕಳು ಒಂದಕ್ಕೊಂದು ಏನೋ ಹೇಳುವುದನ್ನು ನೀವು ನೋಡಬಹುದು, ಆದರೆ ಮಕ್ಕಳು ಹಾಗೇ ಸುಮ್ಮನೆ ಏನೋ ಹೇಳುತ್ತವೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಅವಳಿ ಮಕ್ಕಳು ಅವರದ್ದೇ ಭಾಷೆಯಲ್ಲಿ ಮಾತನಾಡುತ್ತವೆ, ಅದು ಅವರಿಗೆ ಅರ್ಥವಾಗುತ್ತದೆ, ಇದನ್ನು ಕ್ರಿಪ್ಟೋಪೇಸಿಯಾ ಎಂದು ಕರೆಯುತ್ತಾರೆ. ಮಕ್ಕಳು ಬೆಳೆಯುತ್ತಿದ್ದಂತೆ ಅವರು ಬೇರೆ ಭಾಷೆ ಕಲಿತಾಗ ಈ ಭಾಷೆ ಮರೆತು ಹೋಗುತ್ತವೆ.


ಅವಳಿ ಮಕ್ಕಳು ತಾಯಿಯ ಆಯುಸ್ಸು ಹೆಚ್ಚಿಸುತ್ತವೆ : ವಿಶ್ವವಿದ್ಯಾನಿಲಯವೊಂದು ನಡೆಸಿದ ಸಂಶೋಧನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಯ ಆಯಸ್ಸು ಹೆಚ್ಚಿರುತ್ತದೆ ಎಂದು ತಿಳಿದು ಬಂದಿದೆ. 1800 ರಿಂದ1970 ರವರೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಯ ಆಯಸ್ಸು ಪರಿಶೀಲಿಸಿದಾಗ ಒಂದು ಮಗುವಿಗೆ ಜನ್ಮ ನೀಡಿದ ತಾಯಿಕ್ಕಿಂತ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಯ ಆಯಸ್ಸು ಹೆಚ್ಚಿರುತ್ತದೆ ಎಂಬ ಅಂಶ ತಿಳಿದು ಬಂದಿದೆ.


ಬೇಬಿ ಎ ಮತ್ತು ಬೇಬಿ ಬಿ : ಗರ್ಭಕಂಠದ ಸಮೀಪ ಇರುವ ಮಗುವಿಗೆ ಬೇಬಿ ಎ ಹಾಗೂ ಮತ್ತೊಂದು ಮಗುವಿಗೆ ಬೇಬಿ ಬಿ ಎಂದು ಕರೆಯಲಾಗುವುದು. ಒಂದು ಮಗು ಸಹಜವಾಗಿ, ಮತ್ತೊಂದು ಮಗು ಸಿ ಸೆಕ್ಷನ್ ಮೂಲಕ ಜನನವಾಗಬಹುದು. ಕೆಲವರಿಗೆ ಒಂದು ಮಗು ಸಹಜ ಹೆರಿಗೆ ಮೂಲಕ ಜನನವಾದರೆ, ಮತ್ತೊಂದು ಮಗುವನ್ನು ಸಹಜ ಹೆರಿಗೆಯ ಮೂಲಕ ಜನ್ಮ ನೀಡಲು ತಾಯಿಗೆ ಸಾಧ್ಯವಾಗದೇ ಹೋಗಬಹುದು, ಇಂತಹ ಸಂದರ್ಭದಲ್ಲಿ ಸಿ ಸೆಕ್ಷನ್ ಮಾಡುವ ಮೂಲಕ ಮಗುವನ್ನು ಹೊರ ತೆಗೆಯಬೇಕಾಗುವುದು.


ಅವಳಿ ಮಕ್ಕಳಲ್ಲಿ 2 ವಿಧ, ಭ್ರಾತೃತ್ವ ಹಾಗೂ ಏಕ ರೂಪದ ಅವಳಿ ಮಕ್ಕಳು : ಭ್ರಾತೃತ್ವ ಅವಳಿ ಮಕ್ಕಳು ಸಾಮಾನ್ಯವಾಗಿ ಕಂಡು ಬರುತ್ತದೆ, ಆದರೆ ಏಕ ರೂಪದ ಅವಳಿ ಮಕ್ಕಳು ಒಂದು ಫಲವತ್ತಾದ ಅಂಡಾಣು ಒಡೆದು ಎರಡು ಮಕ್ಕಳಾಗಿರುತ್ತದೆ. ಈ ರೀತಿ ಉಂಟಾಗುವುದು ಬಹಳ ಅಪರೂಪ. ಭಾತೃತ್ವ ಅವಳಿ ಮಕ್ಕಳು, ಎರಡು ಪ್ರತ್ಯೇಕ ಅಂಡಾಣುಗಳಿಗೆ ವೀರ್ಯಾಣು ಸೇರಿದಾಗ ಉಂಟಾಗುತ್ತವೆ.

Exit mobile version