ಐಪಿಎಲ್ 2021: ಪಡಿಕಲ್ ಚೊಚ್ಚಲ ಶತಕ, ಕೋಹ್ಲಿ ಅದ್ಭುತ ಆಟ: ಬೆಂಗಳೂರಿಗೆ ರಾಯಲ್ ಗೆಲುವು

ಮುಂಬೈ, ಏ. 23: ಕನ್ನಡಿಗ ದೇವದತ್‌ ಪಡಿಕಲ್‌(101) ಬೊಂಬಾಟ್‌ ಶತಕದ ಆರ್ಭಟ ಹಾಗೂ ನಾಯಕ ವಿರಾಟ್‌ ಕೋಹ್ಲಿ(72) ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್‌ಸಿಬಿ, ಟೂರ್ನಿಯಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌, ಆರಂಭಿಕ ಬ್ಯಾಟ್ಸಮನ್‌ಗಳ ವೈಫಲ್ಯದ ನಡುವೆಯೂ 20 ಓವರ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆಹಾಕಿತು.

ಈ ಸವಾಲು ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರಂಭಿಕರಾದ ದೇವದತ್ ಪಡಿಕಲ್ ಹಾಗೂ ವಿರಾಟ್ ಕೋಹ್ಲಿ ಅದ್ಭುತ ಜೊತೆಯಾಟವಾಡಿದರು. ಎದುರಾಳಿ ಬೌಲರ್‌ಗಳ ಧೂಳಿಪಟ ಮಾಡಿದ ಈ ಜೋಡಿ, 16.3 ಓವರ್‌ಗಳಲ್ಲಿ ಯಾವುದೇ ವಿಕೆಟ್‌ಗಳನ್ನು ಕಳೆದುಕೊಳ್ಳದೆ 181 ರನ್‌ಗಳಿಸಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಸೀಸನ್‌ನಲ್ಲಿ ಸತತ ನಾಲ್ಕನೇ ಗೆಲುವು ಸಾಧಿಸಿದ ಆರ್.ಸಿ.ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಇನ್ನಿಂಗ್ಸ್ ಆರಂಭದಿಂದಲೂ ಅಬ್ಬರದ ಆಟವಾಡಿ ಬೌಂಡರಿ, ಸಿಕ್ಸರ್ ಗಳಿಂದ ರನ್ ಮಳೆ ಸುರಿಸಿದ ದೇವದತ್ ಪಡಿಕಲ್, ಐಪಿಎಲ್ ಆವೃತ್ತಿಯ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಇವರಿಗೆ ಅದ್ಭುತ ಸಾಥ್ ನೀಡಿದ ನಾಯಕ ಕೋಹ್ಲಿ, ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಅಲ್ಲದೇ IPLನಲ್ಲಿ 50ನೇ ಅರ್ಧಶತಕ ಗಳಿಸಿದ ಸಾಧನೆ ಮಾಡಿದ ಕಿಂಗ್ ಕೋಹ್ಲಿ, IPLನಲ್ಲಿ 6000 ರನ್‌ಗಳ ಗಡಿದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

Exit mobile version