ಮಾರ್ಚ್ 26ರಿಂದ 15ನೇ ಆವೃತ್ತಿಯ ಐಪಿಎಲ್‌ ಕದನ !

IPL

15ನೇ ಆವೃತ್ತಿಯ ಐಪಿಎಲ್‌ ಮಾರ್ಚ್ 26ರಿಂದ ಪ್ರಾರಂಭಗೊಳ್ಳಲಿದೆ ಎಂದು ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ತಿಳಿಸಿದ್ದಾರೆ

ಮಾರ್ಚ್‌ 26, 2022ರಿಂದ ಪ್ರಾರಂಭಗೊಳ್ಳಲಿರುವ ಐಪಿಎಲ್ ಮುಂಬರುವ ಸೀಸನ್‌ನಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು  ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗಿರುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಮೇ 29ಕ್ಕೆ ನಡೆಯಲಿದೆ. ಈ ಮೊದಲು ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತಿದ್ದವು. ಅದರಲ್ಲಿ ಏಳು ಪಂದ್ಯಗಳು ತವರಿನ ಅಂಗಳದಲ್ಲಿ, ಏಳು ಪಂದ್ಯಗಳು ಇತರೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದವು. ಆದ್ರೆ ಈ ಬಾರಿ ಎಲ್ಲಾ ಐಪಿಎಲ್ ಪಂದ್ಯಗಳು ಕೋವಿಡ್ -19 ಬೆದರಿಕೆಯಿಂದಾಗಿ, ಬಹುತೇಕ ಲೀಗ್ ಹಂತದ ಪಂದ್ಯಗಳನ್ನು ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಸಲು ಮಂಡಳಿ ನಿರ್ಧರಿಸಿದೆ. ಉಳಿದಂತೆ ಪುಣೆಯಲ್ಲಿ ಪಂದ್ಯ ನಡೆಯಲಿವೆ. ಹೀಗಾಗಿ ಮುಂಬೈ ಇಂಡಿಯನ್ಸ್ ತವರಿನಲ್ಲಿ ತಮ್ಮ ಪಂದ್ಯಗಳನ್ನು ಆಡುವ ಬಗ್ಗೆ ಇತರ ಫ್ರಾಂಚೈಸಿಗಳು ಬಿಸಿಸಿಐನೊಂದಿಗೆ ಧ್ವನಿ ಎತ್ತಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಪಂದ್ಯ ನಡೆದರೆ ಅದು ಸಮಯೋಚಿತ ನಿರ್ಧಾರವಾಗಿರುತ್ತದೆ. ಆದ್ರೆ ಮುಂಬೈಗೆ ತವರಿನಲ್ಲೇ ಪಂದ್ಯ ನಡೆದಾಗ ಹೆಚ್ಚಿನ ಸಹಾಯವಾಗುತ್ತದೆ ಎಂಬುದು ಇತರೆ ಫ್ರಾಂಚೈಸಿಗಳು ಆತಂಕ ವ್ಯಕ್ತಪಡಿಸಿವೆ.

ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ
ಈ ಬಾರಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವುದಿಲ್ಲ ಎಂಬ ಮಹತ್ವದ ಮಾಹಿತಿಯನ್ನು ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಹೊರಹಾಕಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಕೊರೊನಾ ವೈರಸ್‌ ಕಾರಣ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಆಗಮನವನ್ನು ತಡೆಯಲಾಗಿತ್ತು. ಕೇವಲ ಐಪಿಎಲ್‌ 2021 ಟೂರ್ನಿಯ ಯುಎಇ ಚರಣದಲ್ಲಿ ಮಾತ್ರವೇ ಅಲ್ಪ ಪ್ರಮಾಣದ ಪ್ರೇಕ್ಷಕರಿಗೆ ಅವಕಾಶ ಕೊಡಲಾಗಿತ್ತು. ಈ ಬಾರಿ ಕೆಲ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅನುವು ಮಾಡಿಕೊಡುವ ಬಗ್ಗೆ ಬ್ರಿಜೇಶ್‌ ಪಟೇಲ್‌ ಸುಳಿವು ನೀಡಿದ್ದಾರೆ.


ಐಪಿಲ್‌ ಟೂರ್ನಿ ಮಾರ್ಚ್ 26ರಂದು ಆರಂಭವಾಗಲಿದೆ. ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು. ಮಹಾರಾಷ್ಟ್ರ ಸರಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಈ ಬಾರಿ ಕೆಲ ಸಂಖ್ಯೆಯ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುವುದು. ಅದು ಶೇ. 25 ಅಥವಾ ಶೇ. 50ರಷ್ಟು ಆಗಿರಬಹುದು. ಮಹಾರಾಷ್ಟ್ರ ಸರಕಾರದ ಆದೇಶದ ಮೇಲೆ ಇದು ನಿರ್ಧಾರವಾಗಲಿದೆ,” ಎಂದು ಬ್ರಿಜೇಶ್‌ ಹೇಳಿರುವುದಾಗಿ ಕ್ರಿಕ್‌ಬಝ್‌ ವರದಿ ಮಾಡಿದೆ.

Exit mobile version