ತಾಲಿಬಾನ್‌ಗಳಿಂದ ಭಾರತಕ್ಕಿದೆಯಾ ಅಪಾಯ? ತಾಲಿಬಾನ್‌ ಅಬ್ಬರಿಸಿದ್ರೆ ಭಾರತ ಏಕೆ ಭಯಪಡಬೇಕು?

ಅಫಘಾನಿಸ್ತಾನ ತಾಲಿಬಾನ್ ಪಾಲಾಗಿದೆ. ಈಗಾಗ್ಲೇ ತಾಲಿಬಾನ್‌ ಅಬ್ಬರ, ಆರ್ಭಟಗಳು ಶುರುವಾಗಿವೆ. ಇಡೀ ವಿಶ್ವವೇ ಈ ವಿದ್ಯಮಾನವನ್ನು ಭಯ, ಭೀತಿ, ಕುತೂಹಲದಿಂದ ವೀಕ್ಷಿಸುತ್ತಿದೆ. ಹಾಗಾದ್ರೆ ತಾಲಿಬಾನ್‌ ಅಬ್ಬರಕ್ಕೆ ಭಾರತ ಭಯಪಡಬೇಕಾ? ತಾಲಿಬಾನ್‌ನಿಂದ ಭಾರತಕ್ಕೆ ಎದುರಾಗಬಹುದಾದ ಅಪಾಯಗಳೇನು? ನಮ್ಮ ಆರ್ಥಿಕ ವ್ಯವಸ್ಥೆಗೆ ಏನಾದ್ರೂ ಪೆಟ್ಟು ಬೀಳಲಿದೆಯಾ?ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತಾ ಹೋಗೋಣ…

ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಸೇರಿಯಾಯ್ತು. ಸರಿ ಸುಮಾರು 4 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಅಫ್ಘಾನಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ರಾಜಧಾನಿ ಕಾಬುಲ್‌ನಲ್ಲಿ ತಾಲಿಬಾನ್‌ ಧ್ವಜ ಹಾರುತ್ತಿದೆ. ಇನ್ನೇನು ತಾಲಿಬಾನ್‌ ಪರಮೋಚ್ಚ ನಾಯಕ ಅಬ್ದುಲ್ ಘನಿ ಬರದಾರ್ ಅಪಘಾನಿಸ್ತಾನದ ಅಧ್ಯಕ್ಷ ಅಂತ ಘೋಷಣೆಯಾಗುವುದೊಂದು ಬಾಕಿ ಇದೆ.

ಎರಡು ದಶಕಗಳ ಕಾಲ ಆಳ್ವಿಕೆ ಮಾಡಿದ ಅಫ್ಘಾನಿಸ್ತಾನದಲ್ಲಿ ಯುಎಸ್ ನೇತೃತ್ವದ ಒಕ್ಕೂಟ  ಅಂತ್ಯ ಕಂಡಿದೆ. ಅಮೆರಿಕ ತನ್ನ ಎಲ್ಲಾ ರಾಯಭಾರ ಸಿಬ್ಬಂದಿಯನ್ನು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದು, ಯುಎಸ್ ಮಿಲಿಟರಿ ಆ ಪ್ರದೇಶವನ್ನು ಸುತ್ತುವರಿದಿದೆ.

ಸದ್ಯ ಅಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಸಾವಿರಾರು ಜನ ತಮ್ಮ ಜೀವ ರಕ್ಷಣೆಮಾಡುವುದಕ್ಕೋಸ್ಕರ ದೇಶ ತೊರೆಯುತ್ತಿದ್ದಾರೆ. ಬಸ್‌ ಹತ್ತುವಂತೆ ಜನ ವಿಮಾನ ಹತ್ತಿ ದೇಶ ಬಿಟ್ಟು ಓಡಲು ಹಾತೊರೆಯುವ ವಿಚಿತ್ರ ದೃಶ್ಯಗಳು ಅಫ್ಘಾನಿಸ್ತಾನದ ಕಾಬುಲ್ ಏರ್ಪೋರ್ಟ್‌ನಲ್ಲಿ ಇವತ್ತುಕಂಡು ಬಂದವು.

ದೇಶದ ಹೆಸರನ್ನು ಮತ್ತೊಮ್ಮೆ ಇಸ್ಲಾಮಿಕ್ ಎಮಿರೇಟ್ಸ್ ಆಫ್ ಆಫ್ಘಾನಿಸ್ತಾನ ಎಂದು ಮರು ನಾಮಕರಣ ಮಾಡಲಾಗುವುದು ಎಂದು ತಾಲಿಬಾನ್ ಆಗ್ಲೇ ಹೇಳಿಕೊಂಡಿದೆ. ಶೀಘ್ರವೇ ಅಧಿಕೃತ ಘೋಷಣೆಯೂ ಆಗಲಿದೆ.

ಅಫಘಾನಿಸ್ತಾನದಲ್ಲಿ ನಡೆದ ಈ ಕ್ಷಿಪ್ರ ಬೆಳವಣಿಗೆಯಿಂದ ಭಾರತಕ್ಕೆ ಕಾದಿದೆಯೇ ಅಪಾಯ? ಈ ಬಗ್ಗೆ ನಾವು ಗಂಭೀರವಾಗಿ ಚರ್ಚಿಸಬೇಕಾಗಿದೆ. ಮೊದಲ ಅಂಶ ಏನಂದ್ರೆ ಅಫಘಾನಿಸ್ತಾನ ತಾಲಿಬಾನಿಗಳ ತೆಕ್ಕೆ ಸೇರಿರುವುದರಿಂದ ಮುಂದಿನ ದಿನಗಳಲ್ಲಿ ಅದು ಉಗ್ರರ ಸ್ವರ್ಗ ಆಗುವ ಸಾಧ್ಯತೆ ಇದೆ. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳು ಅಫಘಾನಿಸ್ತಾನಕ್ಕೆ ವರ್ಗಾವಣೆಯಾಗಬಹುದು ಅನ್ನೋದು ತಜ್ಞರ ಲೆಕ್ಕಾಚಾರ. ಜಿಹಾದಿ ಆಧಾರಿತ ಭಯೋತ್ಪಾದನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ತಾಲಿಬಾನಿಗಳು, ಪಾಕಿಸ್ತಾನದ ಒತ್ತಾಯಕ್ಕೆ ಮಣಿದು ಅಲ್‌ಖೈದಾ, ಹಿಜ್ಬುಲ್‌ ಮುಜಾಹಿದ್ದೀನ್‌ ಮುಂತಾದ ಸಂಘಟನೆಗಳಿಗೆ ಶಸ್ತ್ರಾಸ್ತ್ರ, ಹಣಕಾಸು ನೆರವು, ಉಗ್ರರರಿಗೆ ತರಬೇತಿ ಮುಂತಾದ ಸಹಾಯ ಮಾಡಬಹುದು. ಇದರಿಂದ ಭಾರತದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುವ ಆತಂಕ ಇದೆ.

ನಿರೀಕ್ಷೆಯಂತೆ ಪಾಕಿಸ್ತಾನ ತಾಲಿಬಾನಿಗಳಿಗೆ ಬೆಂಬಲ ಕೊಡ್ತಿದೆ. ಆಗ್ಲೇ ತನ್ನ ವಾಯುನೆಲೆಗಳನ್ನು ಬಳಸಿಕೊಳ್ಳಲು ತಾಲಿಬಾನಿಗಳಿಗೆ ಪಾಕಿಸ್ತಾನ ಅನುಮತಿ ನೀಡಿದೆ. ಈಗ ತಾಲಿಬಾನಿಗಳ ಕೈಮೇಲಾಗಿರೋದ್ರಿಂದ ಪಾಕಿಸ್ತಾನಕ್ಕೆ ಆನೆ ಬಲ ಬಂದಾಂತಾಗಿದೆ.

ಇತ್ತೀಚೆಗೆ ನಡೆದ ಇನ್ನೊಂದು ಬೆಳವಣಿಗೆ ಭಾರತ ಬಿ.ಪಿ ಹೆಚ್ಚಿಸಿದೆ. ಅದೇನಂದ್ರೆ ಕೆಲವು ದಿನಗಳ ಹಿಂದೆ ತಾಲಿಬಾನಿಗಳ ನಿಯೋಗವೊಂದು ಚೀನಾಕ್ಕೆ ಭೇಟಿ ಕೊಟ್ಟು ಅಲ್ಲಿನ ವಿದೇಶಾಂಗ ಸಚಿವ ವಾಂಗ್‌ ಯಿ ಅವರನ್ನು ಭೇಟಿ ಮಾಡಿ ಬಂದಿದೆ. ಅಲ್ಲದೆ ‘ಚೀನ ನಮ್ಮ ನಂಬಿಕೆಗೆ ಅರ್ಹ ಸ್ನೇಹಿತ’ ಅಂತ ಅಫಘಾನಿ ನಿಯೋಗ ಬಣ್ಣಿಸಿದೆ.

ತಾಲಿಬಾನ್‌ನ ಈ ಗೆಲುವು ಭಾರತಕ್ಕೆ ಭಾರೀ ನಷ್ಟವುಂಟು ಮಾಡಲಿದೆ. 2001ರಿಂದ ಭಾರತ ಅಫಘಾನಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಅಲ್ಲದೆ ಅಲ್ಲಿನ ಮೂಲಭೂತ ಸೌಕರ್ಯ ವೃದ್ಧಿಗೆ ಎಪ್ಪತ್ತುಸಾವಿರ ಕೋಟಿ ರೂಪಾಯಿ ವ್ಯಯ ಮಾಡಿತ್ತು. ಅದ್ರಲ್ಲೂ ಭಾರತದಲ್ಲಿ ಬಿಜೆಪಿ ಸರ್ಕಾರ ಆಳ್ವಿಕೆಗೆ ಬಂದ ನಂತ್ರ ಅಫಘಾನಿಸ್ತಾನದಲ್ಲಿ ಸೂತನ ಸಂಸತ್ ಭವನ, ಅಣೆಕಟ್ಟು, ಜಲವಿದ್ಯುತ್‌ದಾಗಾರಗಳು, ರಸ್ತೆಗಳು ಮುಂತಾದ ಸೌಕರ್ಯಗಳನ್ನು ಒದಗಿಸಲು ಸಾವಿರಾರು ಕೋಟಿ ಬಂಡವಾಳ ಹೂಡಿದೆ. ಅಲ್ಲದೆ 2019ರಲ್ಲಿ ಮೋದಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಅಫಘಾನಿಸ್ತಾನದಲ್ಲಿ ನೂರಕ್ಕೂ ಹೆಚ್ಚು ಯೋಜನೆಗಳಿಗೆ 5.9ಲಕ್ಷ ಕೋಟಿ ನೀಡುವ ಭರವಸೆಯನ್ನೂ ನೀಡಿದ್ರು. ಆದ್ರೆ ಈಗ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಭಾರತ ಹೂಡಿರುವ ಸಾವಿರಾರು ಕೋಟಿ ರೂಪಾಯಿ ಮರಳಲ್ಲಿ ನೀರು ಸುರಿದಂತಾಗಿದೆ.

ಭಾರತ ಮತ್ತು ಅಫಘಾನಿಸ್ತಾನದ ನಡುವೆ ಹಿಂದೆ ಒಳ್ಳೆ ಬಾಂಧವ್ಯ ಇತ್ತು. ಇದರ ಪ್ರಯೋಜನ ಪಡೆದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತನ್ನ ಸರಕು ಸಾಗಣೆಗಾಗಿ ಪಾಕಿಸ್ತಾನದ ಮೂಲಕವೇ ಇದ್ದ ಭೂಮಾರ್ಗದ ಅವಲಂಬನೆಯನ್ನು ತಪ್ಪಿಸಿ, ಇರಾನ್‌ಮ ಚಬಾಹರ್‌ ಬಂದರನ್ನು ಅಭಿವೃದ್ಧಿಪಡಿಸಿ, ಭಾರತದಿಂದ ಇರಾನ್‌, ಇರಾನ್‌ನಿಂದ ಅಫಘಾನಿಸ್ತಾನ ಅಫಘಾನಿಸ್ತಾನದ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಮಾಗ್ರಿ ರಫ್ತು ಮಾಡುವ ಹೊಸ ಜಲ ಹಾಗೂ ಭೂಮಾರ್ಗವನ್ನು ಸೃಷ್ಟಿಸಿಕೊಂಡಿತ್ತು.

ಅಫಘಾನಿಸ್ತಾನದ ಅಬಿವೃದ್ಧಿಗೆ ಹೇರಳವಾಗಿ ಧನಸಹಾಯ ಮಾಡಿ ಮುಸ್ಲಿಂ ರಾಷ್ಟ್ರಗಳ ಪ್ರೀತಿಗೂ ಪಾತ್ರವಾಗಿತ್ತು ಭಾರತ. ಆದ್ರೆ ಈಗ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಭಾರತದ ವ್ಯವಹಾರಿಕ ರಸ್ತೆಗಳೆಲ್ಲಾ ಬಂದ್‌ ಆಗುವ ಭಯ ಇದೆ. ಪಾಕಿಸ್ತಾನ ಹಾಗೂ ಚೀನಾಕ್ಕೆ ಭಾರತದ ಮೇಲಿರುವ ತಮ್ಮ ದಶಕಗಳ ಸೇಡನ್ನು ತಾಲಿಬಾನ್‌ಗಳ ಮೂಲಕ ತೀರಿಸಲಿದೆಯೇ ಅನ್ನೋ ಭೀತಿ ಪ್ರಾರಂಭವಾಗಿದೆ.

ಇದು ಭಾರತಕ್ಕೆ ತಾಲಿಬಾನ್‌ನಿಂದ ಎದುರಾಗಬಹುದಾದ ಆತಂಕ ಹಾಗೂ ಅಪಾಯ. ಈ ಅಪಾಯವನ್ನು ನಮ್ಮ ಕೇಂದ್ರ ಸರ್ಕಾರ ಯಾವ ರೀತಿ ಉಪಾಯ ಹೂಡಿ ನಿವಾರಿಸುತ್ತೆ. ದೇಶದ ಹಿತವನ್ನು ಹೇಗೆ ರಕ್ಷಿಸುತ್ತೆ ಅನ್ನೋ ಪ್ರಶ್ನೆಗೆ ಕಾಲವೇ ಉತ್ತರ ಕೊಡಲಿದೆ.

Exit mobile version