ಜೆಡಿಎಸ್ ಹೊಸ ಕೋರ್ ಕಮಿಟಿ ರಚಿಸಲು ಜ.18ಕ್ಕೆ ಪಕ್ಷದ ಪ್ರಮುಖರ ಸಭೆ

ಬೆಂಗಳೂರು, ಜ. 15: ಸಂಕ್ರಾಂತಿ ಸಂಭ್ರಮದ ಬೆನ್ನಲ್ಲೇ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಇದರ ಮೊದಲ ಭಾಗವಾಗಿ ಜ.18ರಂದು ಹೊಸದಾಗಿ ಕೋರ್ ಕಮಿಟಿ ರಚಿಸಲು ಸಭೆ ಕರೆಯಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,
ಸೂರ್ಯ ಪಥ ಬದಲಿಸಿ ಹೊಸ ಭರವಸೆಯ ಹೊಂಗಿರಣ ಮೂಡಿಸಿದಂತೆ ಈ ಮಕರ ಸಂಕ್ರಾಂತಿಯಂದು ಜೆಡಿಎಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಹೊಸತನದೊಂದಿಗೆ ಪಕ್ಷದ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಲಾಗುತ್ತಿದೆ.

ಇದರ ಮೊದಲ ಹೆಜ್ಜೆಯಾಗಿ ಈ ತಿಂಗಳ 18ರಂದು ಹೊಸದಾಗಿ ಕೋರ್ ಕಮಿಟಿ ರಚಿಸಲು ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಹೊಸ ಕೋರ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗುವುದು.

ನಂತರ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ನೇಮಕ, ಕಂದಾಯ ವಿಭಾಗವಾರು, ಜಿಲ್ಲೆ, ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗಾಗಿ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Exit mobile version