ಮಹಿಳಾ ಪೇದೆ ಮೇಲೆ ಹಲ್ಲೆ ; ಜಿಗ್ನೇಶ್ ಮೆವಾನಿ ಮತ್ತೆ ಅಸ್ಸಾಂ ಪೊಲೀಸರ ವಶಕ್ಕೆ!

jignesh mevani

ಗುಜರಾತ್‍ನ(Gujarat) ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿಯನ್ನು(Jignesh Mewani) ಅಸ್ಸಾಂ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮಹಿಳಾ ಪೊಲೀಸ್ ಪೇದೆಯೊಂದಿಗೆ ಅನುಚಿತ ವರ್ತನೆ ಮತ್ತು ಹಲ್ಲೆ ಮಾಡಿರುವ ಆರೋಪದ ಮೇಲೆ ಮಹಿಳಾ ಪೇದೆ ನೀಡಿರುವ ದೂರಿನ ಅನ್ವಯ ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.


ಪ್ರಧಾನಿ(Primeminister) ನರೇಂದ್ರ ಮೋದಿ(Narendra Modi) ಅವರ ಕುರಿತು ವಿವಾದಾತ್ಮಕ(Controversial) ಟ್ವೀಟ್(Tweet) ಮಾಡಿದ್ದ ಆರೋಪದ ಮೇಲೆ ಜಿಗ್ನೇಶ್ ಮೆವಾನಿಯನ್ನು ನಾಲ್ಕು ದಿನಗಳ ಹಿಂದೆ ಅಸ್ಸಾಂ ಪೊಲೀಸರು ಬಂಧಿಸಿದ್ದರು. ಗುವಾಹಟಿ ವಿಮಾನ ನಿಲ್ದಾಣದಿಂದ ಕೊಕ್ರಜಾರ್‍ಗೆ ಕರೆದೊಯ್ಯುವಾಗ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಮತ್ತು ಕಾರಿನ ಸೀಟಿನಿಂದ ತನ್ನನ್ನು ತಳ್ಳಲು ಪ್ರಯತ್ನಿಸಿದ್ದಾರೆ ಎಂದು ಮಹಿಳಾ ಪೊಲೀಸ್ ಪೇದೆ ದೂರು ನೀಡಿದ್ದಾರೆ.


ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಂತೆ ಕಾಣುತ್ತಾರೆ. ಅವರು ಸಮುದಾಯಗಳ ನಡುವೆ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ಗೋದ್ರಾ ಹತ್ಯಾಕಾಂಡದ ಕುರಿತು ಮೋದಿ ಬಹಿರಂಗವಾಗಿ ಮಾತನಾಡಬೇಕು ಎಂದು ಜಿಗ್ನೇಶ್ ಮೆವಾನಿ ಟ್ವೀಟ್ ಮಾಡಿದ್ದರು. ಜಿಗ್ನೇಶ್ ಮೆವಾನಿ ಮಾಡಿರುವ ಈ ಟ್ವೀಟ್‍ನಿಂದ ಒಂದು ಸಮುದಾಯಕ್ಕೆ ನೋವಾಗಿದೆ ಮತ್ತು ಈ ರೀತಿಯ ಟ್ವೀಟ್‍ಗಳ ಮೂಲಕ ಒಂದು ಸಮುದಾಯವನ್ನು ಪ್ರಚೋದಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿ ಅಸ್ಸಾಂ ರಾಜ್ಯದ ಕೊಕ್ರಜಾರ್‍ನಲ್ಲಿ ದೂರು ದಾಖಲಾಗಿತ್ತು.

ಹೀಗಾಗಿ ಅಸ್ಸಾಂ ಪೊಲೀಸರು ಗುಜರಾತ್‍ಗೆ ತೆರಳಿ ಏಪ್ರಿಲ್ 21ರಂದು ಶಾಸಕ ಜಿಗ್ನೇಶ್ ಮೆವಾನಿಯನ್ನು ಬಂಧಿಸಿದ್ದರು. ನಾಲ್ಕು ದಿನಗಳ ಬಳಿಕ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಇದೀಗ ಅಸ್ಸಾಂ ಪೊಲೀಸರು ಮಹಿಳಾ ಪೊಲೀಸ್ ಪೇದೆಯೊಂದಿಗೆ ಅನುಚಿತ ವರ್ತನೆ ಮತ್ತು ಹಲ್ಲೆ ದೂರಿನ ಅನ್ವಯ ಸೆಕ್ಷನ್ 323, 353 ಮತ್ತು 354 ಅಡಿ ಪ್ರಕರಣ ದಾಖಲಿಸಿ ಮತ್ತೆ ಬಂಧಿಸಿದ್ದಾರೆ.

Exit mobile version