ಕನ್ನಡವನ್ನು ಕೊಳಕು ಭಾಷೆ ಎಂದು ಅವಮಾನಿಸಿದ ಗೂಗಲ್‌ ವಿರುದ್ಧ ಕನ್ನಡಿಗರ ಆಕ್ರೋಶ

ಬೆಂಗಳೂರು, ಜೂ. 3: 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ವಿಶ್ವದ ಲಿಪಿಗಳ ರಾಣಿ ಎಂದೆಲ್ಲ ವಿನೋಬಾ ಬಾವೆ ಬಣ್ಣಿಸಿದ್ದರು. ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪದ ನಡುವೆಯೂ ಒಂದಷ್ಟು ಯುವಪೀಳಿಗೆಯವರು ಕನ್ನಡ ಭಾಷೆಯ ಉಳಿವಿಗಾಗಿ ಅಭಿಯಾನಗಳನ್ನು ಮಾಡುತ್ತಾ, ಆಧುನಿಕ ತಂತ್ರಜ್ಞಾನದಲ್ಲೂ ಕನ್ನಡದ ಉಳಿಸುವಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಕನ್ನಡ ಭಾಷೆಗೆ ಇದೀಗ ಹೊಸದೊಂದು ಕಳಂಕ ಅಂಟಿಕೊಂಡಿದೆ. ಕನ್ನಡ ಭಾಷೆ ಭಾರತದ ಅತ್ಯಂತ ಅಸಹ್ಯಕರ, ಕೊಳಕು ಭಾಷೆ ಎಂದು ಗೂಗಲ್ ಘೋಷಿಸಿದೆ!

ಹೌದು, ನೀವೇನಾದರೂ ಗೂಗಲ್​ ಸರ್ಚ್​ಗೆ ಹೋಗಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದು? ಎಂದು ಸರ್ಚ್ ಮಾಡಿದರೆ ಅಲ್ಲಿ ಬರುವ ಉತ್ತರ ಕನ್ನಡ! ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ ಇರುವ ಭಾಷೆ ಕನ್ನಡ ಎಂದು ಕ್ರಿ.ಶ. 1675ರಲ್ಲೇ ಮಹಾಕವಿಗಳು ಕನ್ನಡ ಭಾಷೆಯ ಬಗ್ಗೆ ಹಾಡಿ ಹೊಗಳಿದ್ದರು. ಆದರೆ, ಈ ಸುಂದರವಾದ ಭಾಷೆಗೆ ಅಗ್ಲಿಯೆಸ್ಟ್​ ಭಾಷೆ ಎಂದು ಸರ್ಟಿಫಿಕೇಟ್ ನೀಡಿರುವ ಗೂಗಲ್ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

ಕನ್ನಡಿಗರು ವಿಶಾಲ ಹೃದಯದವರು. ಸ್ವಾಭಿಮಾನಿ ಕನ್ನಡಿಗರನ್ನು ಕೆಣಕುವಂತೆ ಅತ್ಯಂತ ಕೆಟ್ಟ ಭಾಷೆ ಎಂದು ಗೂಗಲ್ ನಲ್ಲಿ ಕನ್ನಡಕ್ಕೆ ಅಪಮಾನ ಮಾಡಿರುವುದಕ್ಕೆ ಇದೀಗ ಇನ್​ಸ್ಟಾಗ್ರಾಂ, ಫೇಸ್​ಬುಕ್, ಟ್ವಿಟ್ಟರ್​ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕೋಟ್ಯಂತರ ಜನರು ಮಾತನಾಡುವ ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದಿರುವುದಕ್ಕೆ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. 6 ಕೋಟಿ ಜನರು ಮಾತನಾಡುವ ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದೆ. ಈ ಭಾಷೆಯನ್ನು ಹೀಗೆ ಹೀಗಳೆಯಲು ಯಾವ ಆಧಾರವಿದೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಸ್ಕ್ರೀನ್​ಶಾಟ್ ಅನ್ನು ಶೇರ್ ಮಾಡಿಕೊಂಡು ಸಾಹಿತಿಗಳು, ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ನಿರ್ದೇಶಕ ಪನ್ನಗಾಭರಣ, ನಟಿ ಅದ್ವಿತಿ ಶೆಟ್ಟಿ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾ ಪೋಸ್ಟ್, ವಿಡಿಯೋಗಳ ಮೂಲಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತದ ಅತ್ಯಂತ ಅಗ್ಲಿಯೆಸ್ಟ್ (ಕೊಳಕು, ಅಸಹ್ಯಕರ) ಭಾಷೆ ಯಾವುದು ಎಂಬ ಪ್ರಶ್ನೆಗೆ ಕನ್ನಡ ಎಂದು ಉತ್ತರ ತೋರಿಸುತ್ತಿರುವ ಗೂಗಲ್ ಯಾವ ಆಧಾರದ ಮೇಲೆ ಈ ರೀತಿ ತೋರಿಸುತ್ತಿದೆ? ಎಂದು ಕನ್ನಡಿಗರು ಸಿಡಿದೆದ್ದಿದ್ದಾರೆ. ಪರಭಾಷಿಕರು ಕೂಡ ಸುಲಭವಾಗಿ ಕನ್ನಡವನ್ನು ಕಲಿತಿದ್ದಾರೆ. ಅತ್ಯಂತ ಸರಳ, ಸುಂದರವಾಗಿರುವ, ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರಾಚೀನ ಭಾಷೆ ಕನ್ನಡ ಅದು ಯಾವ ರೀತಿಯಲ್ಲಿ ಕೊಳಕು ಭಾಷೆಯಾಗಿ ಕಾಣುತ್ತಿದೆ? ಎಂದು ಟ್ವಿಟ್ಟಿಗರು ಕಿಡಿ ಕಾರಿದ್ದಾರೆ.

Exit mobile version