ಮಹಾ ಪ್ರವಾಹಕ್ಕೆ ಕೊಚ್ಚಿ ಹೋದ ಆಂಧ್ರ

 ಚಿತ್ತೂರು ನ 19 : ಬಂಗಾಳ ಕೊಲ್ಲಿಯಲ್ಲಿ (Bangala Kolli) ಉಂಟಾಗಿರುವ ವಾಯುಭಾರ  ಕುಸಿತವು ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ (Tirupathi) ಸಂಕಷ್ಟ ತಂದಿಟ್ಟಿದೆ. ವಾಯುಭಾರ ಕುಸಿತದ ಪರಿಣಾಮ ಬುಧವಾರ ರಾತ್ರಿಯಿಂದೀಚೆಗೆ ತಿರುಮಲ, ತಿರುಪತಿ ಸೇರಿದಂತೆ ಚಿತ್ತೂರು (Chittur) ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ದೇಗುಲ (Temple) ನಗರದಲ್ಲಿ ಇಂಥ ಮಳೆ (Rain) ಅನಾಹುತ ಘಟಿಸಿದ್ದು 1996 ಭೀಕರ ಪ್ರವಾಹದ (flood) ಬಳಿಕ ಇದೇ ಮೊದಲು ಎನ್ನಲಾಗುತ್ತಿದೆ.

ತಿರುಪತಿಯ ಹಲವು ತಗ್ಗು ಪ್ರದೇಶ ಮತ್ತು ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುಮಲ (Tirumala) ಬೆಟ್ಟಕ್ಕೆ ಹೊಂದಿಕೊಂಡಿರುವ ಎಲ್ಲಾ ನಾಲ್ಕು ಪವಿತ್ರ ಮಾಡಾ ಬೀದಿಗಳು ಮತ್ತು ವೈಕುಂಠ ಕ್ಯೂ ಕಾಂಪ್ಲೆಕ್ಸ್‌ ಕೂಡಾ ಪೂರ್ಣ ಜಲಾವೃತವಾಗಿದೆ. ತಿರುಮಲದ ಜಪಾಲಿ ಆಂಜನೇಯ ದೇಗುಲ (Japali anjaneya temple) ಕೂಡಾ ನೀರಿನಲ್ಲಿ ಮುಳುಗಿದೆ. ಭಾರೀ ಮಳೆಯ ಪರಿಣಾಮ ತಿಮ್ಮಪ್ಪನ ದರ್ಶನವನ್ನು ಗುರುವಾರ ಸ್ಥಗಿತಗೊಳಿಸಬೇಕಾಗಿ ಬಂದಿದ್ದು, ದೇವರ ದರ್ಶನಕ್ಕೆ ಆಗಮಿಸಿದ್ದ ಸಾಕಷ್ಟು ಜನ ಬೆಟ್ಟದ ಮೇಲೇ ಸಿಕ್ಕಿಬಿದ್ದಿದ್ದಾರೆ.

ಬಂಗಾಳಕೊಲ್ಲೆಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಶುಕ್ರವಾರ ಮುಂಜಾನೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ನಡುವಿರುವ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದು, ಇದು ಕ್ರಮೇಣ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ತಮಿಳುನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಇದೇ ವೇಳೆ ಶುಕ್ರವಾರ ಬೆಳಿಗ್ಗೆಯಿಂದ ತಮಿಳುನಾಡಿನ ಉತ್ತರದ ಜಿಲ್ಲೆಗಳು ಮತ್ತು ನೆರೆಯ ಪುದುಚೇರಿಯಲ್ಲಿ ಮಳೆ ಪ್ರಮಾಣ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Exit mobile version