ಕೇಂದ್ರ ಹಾಗೂ ‌ರಾಜ್ಯ ಸರ್ಕಾರಗಳ ದುರಾಡಳಿತವನ್ನು ಪ್ರತಿ ಮನೆಗೆ ತಿಳಿಸೋಣ: ಸಿದ್ದರಾಮಯ್ಯ

ಬೆಂಗಳೂರು, ಜ. 07: ಕೇಂದ್ರ ಹಾಗೂ ‌ರಾಜ್ಯ ಸರ್ಕಾರಗಳ ದುರಾಡಳಿತವನ್ನು ಪ್ರತಿ ಮನೆಗೆ ತಿಳಿಸಬೇಕಿದ್ದು, ಇದಕ್ಕಾಗಿ ನಾಯಕರು ಹಾಗೂ ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟಲು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಂಟ್ವಾಳದಲ್ಲಿ ನಡೆದ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಮುಖಂಡರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನಾವು ಅಧಿಕಾರಕ್ಕೆ ಬಂದಾಗ ಜನರಿಗೆ ನೀಡಿದ್ದ ಅಷ್ಟೂ ಭರವಸೆಗಳನ್ನು ಈಡೇರಿಸಿದ ಹೊರತಾಗಿಯೂ ನಂತರದ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆಯದಿರಲು ಪ್ರಮುಖ ಕಾರಣಗಳಲ್ಲಿ ಗ್ರಾಮ, ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಸರ್ಕಾರದ ಸಾಧನೆಯನ್ನು ಪ್ರಚಾರ ಮಾಡುವಲ್ಲಿ ಪೂರ್ಣ ಯಶಸ್ವಿಯಾಗದೆ ಇರುವುದು ಕೂಡ ಒಂದು.

ಯಾವುದೇ ಒಂದು ರಾಜಕೀಯ ಪಕ್ಷ ಬೆಳೆಯಬೇಕಾದರೆ ಅದಕ್ಕೆ ಸಂಘಟನೆ ಹಾಗೂ ಸಂಘರ್ಷ ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷವನ್ನು ನಮ್ಮ ಕೆಪಿಸಿಸಿಯ ಅಧ್ಯಕ್ಷರು ಸಂಘಟನೆ ಮತ್ತು ಸಂಘರ್ಷದ ವರ್ಷ ಎಂದು ಘೋಷಿಸಿದ್ದಾರೆ, ಇದು ಈ ವರ್ಷಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ಚುನಾವಣೆವರೆಗೂ ಮುಂದುವರೆಯಬೇಕು.

ಕೊರೊನಾದಂತಹ ಸಂದಿಗ್ಧ ಸಮಯದಲ್ಲಿ ಜನರ ನೆರವಿಗೆ ಬರಬೇಕಿದ್ದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾವು ಜಾರಿಗೆ ತಂದಿದ್ದ ಜನಪರ ಯೋಜನೆಗಳಾದ ಅನ್ನಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿದೆ, ಇಂದಿರಾ ಕ್ಯಾಂಟೀನ್ ಮುಚ್ಚುವ ಹಂತ ತಲುಪಿದೆ, ಪಶು ಭಾಗ್ಯ, ಕ್ಷೀರಧಾರೆ, ವಿದ್ಯಾರ್ಥಿ ವೇತನಗಳನ್ನು ನಿಲ್ಲಿಸಲಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಸಿಲಿಂಡರ್ ಬೆಲೆ ರೂ.350 ಆಗಿದ್ದನ್ನೇ ದೊಡ್ಡ ಚಳವಳಿಯಾಗಿ ರೂಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಮಾಡುತ್ತಿರುವುದು ಏನು? ಸಿಲಿಂಡರ್ ಬೆಲೆ ರೂ.800, ಪೆಟ್ರೋಲ್ ಬೆಲೆ ರೂ.86, ಡೀಸೆಲ್‌ ರೂ.80 ಆಗಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಮಾತನಾಡಲ್ಲ?

ದೇಶದ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ತಮ್ಮ ಮನ್ ಕೀ ಬಾತ್ ನಲ್ಲಿ ಒಮ್ಮೆಯಾದರೂ ಮಾತನಾಡಿದ್ದಾರ? 7 ವರ್ಷದ ಹಿಂದೆ ಹೇಳಿದ್ದ ಅಚ್ಚೇ ದಿನ್ ಪದವನ್ನು ಸ್ವತಃ ಬಿಜೆಪಿ ನಾಯಕರೇ ಮರೆತಂತಿದೆ. ಜನವಿರೋಧಿ ಕಾಯ್ದೆಗಳ ಜಾರಿ ಮೂಲಕ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಗುಲಾಮನಂತೆ ವರ್ತಿಸುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತವನ್ನು ಪ್ರತಿ ಮನೆಗೆ ತಿಳಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಬೇಕು. ಇದಕ್ಕಾಗಿ ಎಲ್ಲ ವರ್ಗ, ಸಮುದಾಯ, ಜಾತಿಗಳ ಪ್ರತಿನಿಧಿಗಳನ್ನು ಒಳಗೊಂಡ ಬೂತ್ ಕಮಿಟಿಗಳನ್ನು ರಚಿಸಿ, ಬೂತ್ ಮಟ್ಟದಿಂದ ಪಕ್ಷ ಕಟ್ಟುವ ಕೆಲಸವನ್ನು ನಾಯಕರು, ಕಾರ್ಯಕರ್ತರು ಒಂದಾಗಿ ಮಾಡಬೇಕಿದೆ.

ನಾವೆಲ್ಲ ಒಟ್ಟಾಗಿ ಜನರ ಬಳಿಗೆ ಹೋಗೋಣ, ನಮ್ಮ ಸರ್ಕಾರದ ಸಾಧನೆಗಳು, ಬಿಜೆಪಿಯವರ ಭ್ರಷ್ಟಾಚಾರವನ್ನು ಜನರಿಗೆ ಮನದಟ್ಟು ಮಾಡೋಣ. ಜನರಿಗೆ ಸತ್ಯದ ಅರಿವಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Exit mobile version