ವಿಜಯೇಂದ್ರ ಅವರಿಂದ ಕಿಕ್ ಬ್ಯಾಕ್ ಪಡೆದ ಆರೋಪ: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು,ಜೂ.19: ಭದ್ರಾ ಮೇಲ್ದಂಡೆ ಕಾಮಗಾರಿಯ ರೂ. 20,000 ಕೋಟಿ ಟೆಂಡರ್ ನಲ್ಲಿ ಬಿ.ವೈ ವಿಜಯೇಂದ್ರ 10% ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಶಾಸಕ ಎಚ್. ವಿಶ್ವನಾಥ್ ಆರೋಪವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಎರಡು ಕಾರಣಗಳಿಗಾಗಿ ಈ ಆರೋಪ ಗಂಭೀರ ಸ್ವರೂಪದ್ದಾಗಿದೆ. ಮೊದಲನೆಯದಾಗಿ ಆರೋಪ ನೇರವಾಗಿ ಸಿಎಂ ಅವರ ಮಗನ ಮೇಲಿದೆ. ಎರಡನೆಯದಾಗಿ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿದ್ದಾರೆ. ತರಾತುರಿಯಲ್ಲಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿದ್ದನ್ನು ನೋಡಿದರೆ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಸ್ಪಷ್ಟವಾಗಿದೆ ಎಂದರು.

ಅಲ್ಲದೇ, ಬೆಂಗಳೂರಿನ ಬಿಐಇಸಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್ ನ ಹಾಸಿಗೆ ಮತ್ತು ಬೆಡ್ ಗಳ ಖರೀದಿ-ಮಾರಾಟದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಎಚ್.ವಿಶ್ವನಾಥ್ ಅವರ ಇನ್ನೊಂದು ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಈಗಿನ ಬಿಜೆಪಿ ಸರ್ಕಾರದ ರೂವಾರಿಯೇ ತಾನೆಂದು ಹೇಳಿಕೊಳ್ಳುತ್ತಿರುವ ಶಾಸಕ ಎಚ್.ವಿಶ್ವನಾಥ್ ಅವರೇ ಈ ಸರ್ಕಾರವನ್ನು ‘ಗುತ್ತಿಗೆದಾರರ ಸರ್ಕಾರ’ ಎಂದು ಬಣ್ಣಿಸಿರುವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದ ಹಾಗಿದೆ. ಎಸಿಬಿ ಅವರನ್ನೂ ಕರೆದು ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಿಗೆ ಬರಬಹುದು.

ಮುಖ್ಯಮಂತ್ರಿಗಳು ಮತ್ತು ಮಗನ ವಿರುದ್ಧದ ಆರೋಪ ಇದೇ ಮೊದಲ ಬಾರಿ ಕೇಳಿಬಂದದ್ದಲ್ಲ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಂದು ವರ್ಷದಿಂದ ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೈಯ್ಯುತ್ತಾ ಬಂದಿದ್ದಾರೆ. ಇನ್ನೊಬ್ಬ ಶಾಸಕ ಸಿ.ಪಿ.ಯೋಗೀಶ್ವರ್ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

Exit mobile version