Bengaluru: ಕೆಲ ವರ್ಷಗಳ ಹಿಂದಷ್ಟೇ ಟ್ವಿಟರ್ ಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಸಾಮಾಜಿಕ ಜಾಲತಾಣ ಕೂ ಶೀಘ್ರವೇ ಸ್ಥಗಿತಗೊಳ್ಳಲಿದೆ. ಕೂ ಮಾರಾಟಕ್ಕೆ ಡೈಲಿ ಹಂಟ್ (Daily Hunt )ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣವನ್ನು ಸ್ಥಗಿತಗೊಳಿಸಲಾಗುತ್ತಿದೆ. ಕೂ ಗೆ ಟೈಗರ್ ಗ್ಲೋಬಲ್ (Koo Tiger Global), ಆಕ್ಸಿಲ್ (Accel) ನಂತಹ ಪ್ರಮುಖ ಹೂಡಿಕೆದಾರರಿಂದ ಹೂಡಿಕೆಯ ನೆರವು ಲಭಿಸಿತ್ತಾದರೂ, ಬಳಕೆದಾರರ ಮೂಲ ಮತ್ತು ಕಳೆದ ವರ್ಷದಲ್ಲಿ ಆದಾಯವನ್ನು ಗಳಿಸುವುದರಲ್ಲಿ ಕೂ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು.
ಅಪ್ರಮೇಯ ಹಾಗೂ ಮಯಾಂಕ್ ಅವರು 2019ರಲ್ಲಿ ಕೂ ಕಂಪನಿಯನ್ನು ಆರಂಭಿಸಿದ್ದರು. ಮತ್ತು 2020ರ ಮಾರ್ಚ್ನಲ್ಲಿ ‘ಕೂ’ಗೆ ಅಧಿಕೃತ ಚಾಲನೆ ನೀಡಿದ್ದರು. 2021ರಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೆಲವು ಪೋಸ್ಟ್ ಹಾಗೂ ಖಾತೆಗಳನ್ನು ವಿಚಾರದಲ್ಲಿ ಟ್ವಿಟ್ಟರ್ (Twitter) ಮತ್ತು ಭಾರತ ಸರಕಾರದ ನಡುವೆ ಸಂಘರ್ಷ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ‘ಕೂ’ಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತ್ತು. ಸ್ವತಃ ಕೇಂದ್ರ ಸಚಿವರೇ ಮೈಕ್ರೋ ಬ್ಲಾಗಿಂಗ್ ಸೈಟ್ (Micro Bloging Site)ನ ಪ್ರಚಾರಕ್ಕೆ ಇಳಿದಿದ್ದರು.
ನಂತರ 2022ರ ನವೆಂಬರ್ (November) ನಲ್ಲಿ ಕೂ ಬ್ರೆಜಿಲ್ಗೂ ಕಾಲಿಟ್ಟಿತ್ತು. ಮುಂದೆ ಟ್ವಿಟ್ಟರ್ ಜೊತೆ ಘರ್ಷಣೆಗಿಳಿದ ದೇಶಗಳಿಗೆಲ್ಲ ಕಾಲಿಟ್ಟು, ಜಾಗತಿಕ ಕಂಪನಿಯಾಗುವ ನಿರೀಕ್ಷೆ ಮೂಡಿಸಿತ್ತು.ಕೂ ಹೂಡಿಕೆದಾರರಿಂದ ಸುಮಾರು 60 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿತ್ತು.
ಕೂಗೆ ಆಂಡ್ರಾಯ್ಡ್ನಲ್ಲಿ 10 ಮಿಲಿಯನ್ಗೂ ಅಧಿಕ ಬಳಕೆದಾರರಿದ್ದರು. ಆದರೆ, ಮುಂದೆ ನಡೆದಿದ್ದೇ ಬೇರೆ. ಕೂ ಆ್ಯಪ್ (Koo App) ಸ್ವಾಧೀನದ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಕೂ ಕಂಪನಿಯ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕಾ ಅವರು ಇತ್ತೀಚೆಗೆ ಲಿಂಕ್ಡ್ಇನ್ನಲ್ಲಿ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದು, ನಾವು ಅನೇಕ ದೊಡ್ಡ ಇಂಟರ್ನೆಟ್ ಕಂಪನಿ (Internet Company)ಗಳು, ಮಾಧ್ಯಮ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಆದರೆ ನಾವು ಬಯಸಿದ ಫಲಿತಾಂಶ ಸಿಗಲಿಲ್ಲ , ಕಂಪನಿಯ ಉದ್ಯೋಗಿಗಳಿಗೆ ಕೂಡ ನಮ್ಮ ಕೈ ಇಂದಲೇ ಸಂಬಳ ನೀಡುವ ಪರಿಸ್ಥಿತಿ ಎದುರಾಯಿತು ಹಾಗಾಗಿ ಕೊನೆಗೆ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.