ಕುರುಬರಹಳ್ಳಿ ಸರ್ವೇ ನಂ.4ರ ಭೂಮಿ ಮೈಸೂರು ರಾಜವಂಶಸ್ಥರಿಗೆ ಸೇರಿದ್ದು: ಹೈಕೋರ್ಟ್‌ ತೀರ್ಪು

ಮೈಸೂರು, ಡಿ. 31: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಕುರುಬಾರಹಳ್ಳಿ ಸರ್ವೆ ನಂಬರ್ 4ಕ್ಕೆ ಸೇರಿದ ಭೂಮಿ ಮೈಸೂರು ರಾಜವಂಶಸ್ಥರಿಗೆ ಸೇರಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ತೀರ್ಪಿನ ಅನ್ವಯ ಮೈಸೂರು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರು ಲಲಿತ ಮಹಲ್ ಹೆಲಿಪ್ಯಾಡ್ ಗೆ ಬೋರ್ಡ್ ಅಳವಡಿಸಿ ನಮಗೆ ಸೇರಿದ ಆಸ್ತಿ ಎಂದು ಘೋಷಿಸಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದ ಸರ್ವೆ ನಂಬರ್ 4ರಲ್ಲಿ 1 ಸಾವಿರದ 500 ಎಕರೆ ಇದೆ. ರಾಜ ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಅಸ್ಥಿತ್ವಕ್ಕೆ ಬಂದ ಮೇಲೆ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥರಿಗೂ ಒಪ್ಪಂದವಾಯಿತು. ಈ ಒಪ್ಪಂದದಲ್ಲಿ ಸರ್ವೆ ನಂಬರ್ 4 ಕ್ಕೆ ಬರುವ 1 ಸಾವಿರದ 500 ಎಕರೆ ಭೂಮಿ ಮೈಸೂರು ರಾಜವಂಶಸ್ಥರಿಗೆ ಸೇರಿದೆ.

ಆದರೆ ಇದು ಸರ್ಕಾರದ ಆಸ್ತಿಯಾಗಿದೆ. 1926 ರಲ್ಲಿ ರಾಜಪ್ರಭುತ್ವ ಇದ್ದ ಅಂದಿನ ಮಹಾರಾಜರೆ ಗ್ರೀನ್ ಲ್ಯಾಂಡ್ ಎಂದು ತಮ್ಮ ಗೆಜೆಟ್ ನಲ್ಲಿ ಪ್ರಕಟಿಸಿದ್ದರು. ಆದ ಕಾರಣ ಇದು ಸರ್ಕಾರದ ಆಸ್ತಿ ಎಂದು ಸರ್ಕಾರ ವಾದ ಮಾಡುತ್ತಿತ್ತು. ಈ ಸಂಬಂಧ ಕಳೆದ ಹತ್ತು ದಿನದ ಹಿಂದೆ ಹೈ ಕೋರ್ಟ್ ತೀರ್ಪು ನೀಡಿ ಇದು ರಾಜವಂಶಸ್ಥರಿಗೆ ಸೇರಿದ ಆಸ್ತಿ ಎಂದು ಮಹತ್ವದ ತೀರ್ಪು ನೀಡಿತು. ನ್ಯಾಯಾಲಯದ ತೀರ್ಪಿನಂತೆ ರಾಜವಂಶಸ್ಥರಿಗೆ ಸರ್ಕಾರ ಖಾತೆ ಮಾಡಿಕೊಡಬೇಕಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ರಾಜವಂಶಸ್ಥರು ಮತ್ತೆ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದ್ದರು.

ನ್ಯಾಯಾಂಗ ನಿಂದನೆ ಕೇಸ್ ಸಂಬಂಧ ಜನವರಿ 19 ರಂದು ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ಅಷ್ಟರಲ್ಲಿ ಸುಪ್ರಿಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ಈಗ ಸದ್ಯ ಮೈಸೂರು ರಾಜವಂಶಸ್ಥರಿಗೆ ಸೇರಿದ ಆಸ್ತಿ ಎಂದು ಪ್ರಮೋದಾ ದೇವಿ ಒಡೆಯರ್ ಅವರು ಬೋರ್ಡ್ ಹಾಕಿದ್ದಾರೆ. ಈ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿ ಏನಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

Exit mobile version