ಬಿಜೆಪಿ ನಾಯಕರ ನಡುವಿನ ವೈಯಕ್ತಿಕ ಕೆಸರೆರಚಾಟಕ್ಕೆ ಕಾರಣವಾಯ್ತು ನಾಯಕತ್ವ ಬದಲಾವಣೆ ಗೊಂದಲ

ಬೆಂಗಳೂರು,ಜೂ.18: ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಜಟಾಪಟಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿಎಂ ಯಡಿಯೂರಪ್ಪ ಅವರನ್ನ ಬದಲಿಸುವ ಕುರಿತು ಬಿಜೆಪಿಯ ಹಲವು ನಾಯಕರು ಬಿಗಿಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ನಡುವೆ ವೈಯಕ್ತಿಕ ಕೆಸರೆರಚಾಟಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ಬಗ್ಗೆ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಸೇರಿದಂತೆ ಅನೇಕರು ಬಹಿರಂಗ ಅಸಮಾಧಾನ ಹೊರ ಹಾಕಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಒನ್ ಟು ಒನ್ ಚರ್ಚೆ ನಡೆಸಿ, ಸಿಎಂ ಆಡಳಿತ ವೈಖರಿ ಹಾಗೂ ಕುಟುಂಬ ಕಾಜಕಾರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಾಯಕತ್ವ ಬದಲಾವಣೆ ಕುರಿತ ಭಿನ್ನಮತ ಶಮನಗೊಳಿಸಲಿಲ್ಲ.

ಇದರಿಂದಾಗಿ ಯಡಿಯೂರಪ್ಪ ಮೇಲಿನ ಬಿಜೆಪಿ ನಾಯಕರ ಸಿಟ್ಟು ಇನ್ನೂ ತಣ್ಣಗಾಗಿಲ್ಲ.‌ ಈ ನಡುವೆ ನಾಯಕತ್ವ ಬದಲಿಗೆ ಸಂಬಂಧಿಸಿದಂತೆ ಎದ್ದಿರುವ ಅದಲು-ಬದಲು ಆಟ ಇದೀಗ ವೈಯಕ್ತಿಕ ತಿಕ್ಕಾಟಕ್ಕೆ ನಾಂದಿ ಹಾಡಿದೆ. ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದ ನಾಯಕರು ಹಾಗೂ ಸಿಎಂ ನಾಯಕತ್ವದ ವಿರುದ್ಧ ಧನಿ ಎತ್ತಿದ್ದ ಬಿಜೆಪಿ ನಾಯಕರ ನಡುವೆ ವೈಯಕ್ತಿಕ ಆರೋಪ-ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ.

ಪರಸ್ಪರ ಕೆಸರೆರಚಾಟ
ಯಡಿಯೂರಪ್ಪ ನಾಯಕತ್ವ ಬೆಂಬಲಿಸಿದ್ದ ತಮ್ಮದೇ ಪಕ್ಷದ ನಾಯಕರ ವಿರುದ್ಧ ಬಿಜೆಪಿಯ ಹಲವರು ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ ಅರವಿಂದ್ ಬೆಲ್ಲದ್ vs ರೇಣುಕಾಚಾರ್ಯ, ಹೆಚ್. ವಿಶ್ವನಾಥ್ vs ಎಸ್.ಆರ್ ವಿಶ್ವನಾಥ್, ಯೋಗೇಶ್ವರ್ vs ಬೊಮ್ಮಾಯಿ, ಯತ್ನಾಳ್ vs ವಿಜಯೇಂದ್ರ‌ ಹಾಗೂ ಈಶ್ವರಪ್ಪ vs ಯಡಿಯೂರಪ್ಪ ಅವರುಗಳ ನಡುವೆ ಶುರುವಾಗಿರುವ ಕೆಸರೆರಚಾಟ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.

ಮೂಲ vs ವಲಸಿಗರು
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂದಿರುವ ನಡುವೆಯೇ ಬಿಜೆಪಿ ಪಕ್ಷದಲ್ಲಿ ಮೂಲದವರು vs ವಲಸಿಗರು ಎಂಬ ಮಾತುಗಳು ಕೇಳಿಬಂದಿವೆ. ಒಂದೇ ಪಕ್ಷದ ನಾಯಕರ ನಡುವೆ ಏರ್ಪಟ್ಟಿರುವ ಈ ಜಟಾಪಟಿ, ಬಿಜೆಪಿಯಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಮೂಲ ಹಾಗೂ ವಲಸಿಗರು ಎಂಬ ಆರೋಪ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿರುವ ಪಕ್ಷಾಂತರಿ ನಾಯಕರುಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ವಜಾಕ್ಕೆ ಆಗ್ರಹ
ಬಿಜೆಪಿಯಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗೊಂದಲ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಪ್ರಮುಖವಾಗಿ ಸರ್ಕಾರದ ಆಡಳಿತ‌ ವೈಖರಿ ಬಗ್ಗೆ ವಾಗ್ದಾಳಿ ನಡೆಸಿರುವ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ, ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಆಗ್ರಹಿಸಿದ್ದಾರೆ. ಮನೆಯೊಂದು ನೂರಾರು ಬಾಗಿಲಾಗಿರುವ ಬಿಜೆಪಿ ಪಕ್ಷದ ಕುರ್ಚಿ ಕದನದಲ್ಲಿ ರಾಜ್ಯ ಅನಾಥವಾಗಿದೆ. ಈ ಅಯೋಗ್ಯತನಕ್ಕೆ ಬಿಜೆಪಿಗೇಕೆ ಅಧಿಕಾರ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದರೆ. ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಪ್ರಯೋಜನ, ಮೊದಲು ವಿಸರ್ಜಿಸಿ ಎಂದು ಎಚ್ಡಿಕೆ ಆಗ್ರಹಿಸಿದ್ದಾರೆ.

ಒಟ್ಟಾರೆ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಮುಖ್ಯಮಂತ್ರಿ ಬದಲಾವಣೆ ಸಮರ ಎಲ್ಲಿಗೆ ಬಂದು ನಿಲ್ಲುತ್ತೇ? ಅನ್ನೋದು ಕುತೂಹಲ ಮೂಡಿಸಿದೆ.

Exit mobile version