ಅವರಂತೆ ಕಲ್ಲು, ಮೊಟ್ಟೆ ಹೊಡೆಯೋದು ಬೇಡ: ನಾವು ಶಾಂತಿಯುತವಾಗಿ ಚುನಾವಣೆ ಎದುರಿಸೋಣ: ಡಿಕೆಶಿ

ಕಲಬುರ್ಗಿ, ಮಾ. 30: ರಾಜಕೀಯದಲ್ಲಿ ಹೂವಿನ ಹಾರ ಹಾಕುವವರು, ಜೈಕಾರ ಹಾಕುವವರು ಇರುತ್ತಾರೆ. ಜತೆಗೆ ಕಲ್ಲು ಹೊಡೆಯುವವರು, ಮೊಟ್ಟೆ ಎಸೆಯುವವರು ಕೂಡ ಇರುತ್ತಾರೆ. ಅವರು ಮಾಡಿದಂತೆ ನಾವು ಮಾಡಲು ಸಾಧ್ಯವಿಲ್ಲ. ಚುನಾವಣೆಯನ್ನು ಶಾಂತಿಯುತವಾಗಿ ಎದುರಿಸೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಈ ರೀತಿಯ ದಾಳಿಗಳು ಸಹಜ. ಆದರೆ, ನಾವು ಅವರಂತೆ ಕಲ್ಲು ತೂರುವುದಿಲ್ಲ. ನಮ್ಮ ಕಾರ್ಯಕರ್ತರು ಸಂಯಮ ಕಾಯ್ದುಕೊಳ‍್ಳಬೇಕೆಂದು ಸಲಹೆ ನೀಡಿದರು.

ಸಿಡಿ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಅಲ್ಲಿ ನಮ್ಮ ಅಭಿಪ್ರಾಯವನ್ನೆಲ್ಲ ಹೇಳಿದ್ದೇವೆ. ಬಿಜೆಪಿಯವರ ಸಂಸ್ಕೃತಿಯನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಆ ಬಗ್ಗೆ ನಾನು ಹೆಚ್ಚಾಗಿ ಏನನ್ನು ಮಾತನಾಡಲು ಬಯಸುವುದಿಲ್ಲ ಎಂದರು.

ಇದೇ ವೇಳೆ‌ ಸಂತ್ರಸ್ತ ಯುವತಿ ಪೋಷಕರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಆರೋಪ ಮಾಡಲಿ ಬಿಡಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಅನುಕೂಲಕ್ಕೆ ಏನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಡಿ ವಿಚಾರವಾಗಿ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದರು.

ರಾಜ್ಯ ಬಿಜೆಪಿ ‌ಸರ್ಕಾರ ಹಲವು ಜನವಿರೋಧಿ ನೀತಿಗಳನ್ನು ‌ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇವರ ಜನ ವಿರೋಧಿ ನೀತಿಗಳಿಂದ ಜನರು ಬೇಸತ್ತು ಹೋಗಿದ್ದು, ಉಪ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

Exit mobile version