ಬಜೆಟ್ ಮಂಡನೆ: ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ದೇಶದ ಹಣಕಾಸು ಸಚಿವರಿವರು!

ಹಣಕಾಸು ಸಚಿವರಾಗಿದ್ದ RK ಷಣ್ಮುಖಂ ಚೆಟ್ಟಿ (Shanmukham Chetty) ಅವರು 1947ರಲ್ಲಿ ಚೊಚ್ಚಲ ಬಜೆಟ್ ಮಂಡಿಸುವುದರೊಂದಿಗೆ ಭಾರತದ ಬಜೆಟ್ ಮಂಡನೆಗಳ ಪ್ರಯಾಣವನ್ನು ಪ್ರಾರಂಭಿಸಿದರು. ಅಲ್ಲಿಂದೀಚೆಗೆ, ಸ್ವಾತಂತ್ರ್ಯದ ನಂತರ 34 ಹಣಕಾಸು ಮಂತ್ರಿಗಳು ಬಜೆಟ್ ಮಂಡಿಸಿದ್ದಾರೆ. ಮೊದಲ ಬಜೆಟ್ನಿಂದ ಇಂದಿನವರೆಗಿನ ಬಜೆಟ್ (Budget) ಮಂಡನೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಹಾಗಾಗಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ದೇಶದ ಹಣಕಾಸು ಸಚಿವರು ಯಾರು ಯಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

ದಿ.ಮೊರಾರ್ಜಿ ದೇಸಾಯಿ
ಇವರು ಭಾರತೀಯ ರಾಜಕೀಯದಲ್ಲಿ ಅನುಭವಿ ರಾಜಕಾರಣಿ ಎಂದೇ ಹೆಸರು ಮಾಡಿದ್ದಾರೆ.ಭಾರತೀಯ ಹಣಕಾಸು ಮಂತ್ರಿಗಳಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದ್ದು. ದಿ.ಮೊರಾರ್ಜಿ ದೇಸಾಯಿ (Mr. Morarji Desai) ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ 10 ಬಾರಿ ಬಜೆಟ್ ಮಂಡಿಸಿದ್ದಾರೆ. 1950 ರ ದಶಕದಲ್ಲಿ ಹಣಕಾಸು ಸಚಿವರಾಗಿ ತದನಂತರ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ .

ಪಿ ಚಿದಂಬರಂ
ಪಿ ಚಿದಂಬರಂ (P Chidambaram) ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಒಂಬತ್ತು ಬಜೆಟ್ ಮಂಡನೆಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 1990ರ ದಶಕ ಮತ್ತು 2000ರ ದಶಕದ ಆರಂಭದಲ್ಲಿ ಅವರ ಅಧಿಕಾರಾವಧಿಯಲ್ಲಿ ಸರ್ಕಾರ ಆರ್ಥಿಕ ಸುಧಾರಣೆ, ಹಣಕಾಸಿನ ಬಲವರ್ಧನೆ ಮತ್ತು ಜಾಗತೀಕರಣದ ಆರ್ಥಿಕತೆಯ ಸವಾಲುಗಳನ್ನು ಪರಿಪೂರ್ಣವಾಗಿ ನಿರ್ವಹಿಸಿತ್ತು.

ಪ್ರಣಬ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರು ಭಾರತದ ರಾಜಕೀಯದಲ್ಲಿ ಅತ್ಯಂತ ಹಿರಿಯರು, ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಎಂಟು ಬಾರಿ ಬಜೆಟ್ ಮಂಡಿಸಿದರು. 1980ರ ದಶಕ, 2009 ಮತ್ತು 2012 ರ ಅವರ ಅವಧಿಗಳಲ್ಲಿ ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ಯಶವಂತ್ ಸಿನ್ಹಾ
ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಏಳು ಬಜೆಟ್ ಮಂಡನೆ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ 1998 ರಿಂದ 2002 ರವರೆಗೆ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಮನಮೋಹನ್ ಸಿಂಗ್
ಪ್ರಧಾನಿಯಾಗುವ ಮೊದಲು, ಖ್ಯಾತ ಅರ್ಥಶಾಸ್ತ್ರಜ್ಞ ರಾಗಿದ್ದ ಮನಮೋಹನ್ ಸಿಂಗ್ (Manamohan Singh) ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಆರು ಬಾರಿ ಬಜೆಟ್ ಮಂಡಿಸಿದ್ದರು. 1990ರ ದಶಕದಲ್ಲಿ ಅವರು ಮಂಡಿಸಿದ ಬಜೆಟ್ ಭಾರತದ ಆರ್ಥಿಕ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ.

ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಜುಲೈ 2019 ರಿಂದ ಇಂದಿನವರೆಗೆ 6 ಬಜೆಟ್ ಮಂಡಿಸಿದ್ದಾರೆ. ಅಲ್ಲದೆ ಅವರು ದೇಶದ ಮೊದಲ ಪೂರ್ಣ ಪ್ರಮಾಣದ ಮಹಿಳಾ ಹಣಕಾಸು ಸಚಿವರಾಗಿದ್ದಾರೆ.ಈಗ ಪ್ರಸಕ್ತ ಸಾಲಿನ ಬಜೆಟ್ ಮಂಡಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಮನಮೋಹನ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಕ್ಷತಾ ಹೆಗ್ಡೆ

Exit mobile version