ವಿಲಾಸಿ ಜೀವನ ನಡೆಸುವಾಸೆ: ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಇಬ್ಬರು ಅಂದರ್

ಮೈಸೂರು, ಮಾ. 16: ಐಷಾರಾಮಿ ಜೀವನ ನಡೆಸುವ ನಿಟ್ಟಿನಲ್ಲಿ ಆರ್‌ಬಿಐ ನೌಕರನೆಂದು ಸಾರ್ವಜನಿಕರನ್ನು ನಂಬಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ವಂಚಕರಿಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ನಕಲಿ ದಾಖಲಾತಿಗಳು ಹಾಗೂ 3 ದುಬಾರಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಹೆಬ್ಬಾಳದ ಮಾದೇಗೌಡ ಸರ್ಕಲ್ ನಿವಾಸಿ, ರಿಯಲ್ ಎಸ್ಟೇಟ್ ವ್ಯವಹಾರಿ ಎನ್.ಮಂಜು (30), ನಂಜನಗೂಡು ತಾಲ್ಲೂಕು ಎಂ.ಕೊಂಗಹಳ್ಳಿ ನಿವಾಸಿ, ನಿವೃತ್ತ ಕಂಡಕ್ಟರ್ ಬಿ.ಶಂಕರ್ (ಹಾಲಿವಾಸ ಶ್ರೀರಾಂಪುರ) ಬಂಧಿತ ಆರೋಪಿಗಳು. ಆರೋಪಿಗಳಿಂದ ಆರ್‌ಬಿಐನ ನಕಲಿ ದಾಖಲಾತಿಗಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್‌ಟಾಪ್, ಪ್ರಿಂಟರ್ಸ್‌, ಆರ್‌ಬಿಐನ 25 ನಕಲಿ ಬಾಂಡ್ ಪೇಪರ್‌ಗಳು, 2 ಸೀಲುಗಳು ಆರೋಪಿ ಮಂಜುಗೆ ಸಂಬಂಧಿಸಿದ ವಿವಿಧ ಬ್ಯಾಂಕುಗಳ ಪಾಸ್‌ಪುಸ್ತಕಗಳು, ಚೆಕ್ ಪುಸ್ತಕಗಳು, ಮಹೇಂದ್ರ ಎಕ್ಸ್ ಯುವಿ 500, ಮಾರುತಿ ಸುಜುಕಿ ಬಲೇನೋ, ಬಿಎಂಡಬ್ಲ್ಯೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಜು ಎಂಬಾತ ತಾನು ಭಾರತೀಯ ರಿಸರ್ವ್ ಬ್ಯಾಂಕ್‌ನ ನೌಕರೆನಂದು ಹೇಳಿ, ಹಣ ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸುತ್ತಿದ್ದ, ಈತನೊಂದಿಗೆ ಸೇರಿಕೊಂಡಿದ್ದ ಬಿ.ಶಂಕರ್ ಆರ್‌ಬಿಐನ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೀಡುತ್ತಿದ್ದ. ಹೆಬ್ಬಾಳ್ ಜಯಮ್ಮ ತಿಮ್ಮೇಗೌಡ ಕಾಂಪ್ಲೆಕ್ಸ್ ನಲ್ಲಿ ಎಂ.ಎಸ್. ಡೆವಲಪರ್ಸ್‌ ಮತ್ತು ಕನ್ಸ್‌ಟ್ರಕ್ಷನ್ ಕಚೇರಿ ಇಟ್ಟುಕೊಂಡಿದ್ದ ಕೆಎಸ್‌ಆರ್‌ಟಿ ಸಿ ಲೇಔಟ್‌ನ ನಿವಾಸಿಯೊಬ್ಬರಿಗೆ 30 ಲಕ್ಷ ರೂ. ವಂಚಿಸಿದ್ದರು.

ಈ ಸಂಬಂಧ ಅವರು ನಗರದ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಸಂಬಂಧ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಮಾ.8 ರಂದು ಇಬ್ಬರು ಆರೋಪಿಗಳನ್ನು ಮೈಸೂರಿನ ಕೆ.ಆರ್.ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆಯ ಬಳಿ ವಶಕ್ಕೆ ಪಡೆದು, ವಿಚಾರಣೆ ಮಾಡಿದಾಗ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಇವರು ಹಲವಾರು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿ, ಜನರಿಗೆ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ, ಆರ್‌ಬಿಐನ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೀಡಿ, ಕೋಟ್ಯಂತರ ರೂ. ಪಡೆದು ವಂಚಿಸಿದ್ದರು. ಅಲ್ಲದೇ, ದುಬಾರಿ ಕಾರುಗಳಲ್ಲಿ ಓಡಾಡುತ್ತಾ, ಬೆಂಗಳೂರು, ದೆಹಲಿ, ಬಾಂಬೆ ಮತ್ತಿತರೆ ಸ್ಥಳಗಳಿಗೆ ವಿಮಾನದ ಮೂಲಕ ಓಡಾಡಿಕೊಂಡು, ಸ್ಟಾರ್ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡಿ ಹಣ ಖರ್ಚು ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದರೆಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಮತ್ತಷ್ಟು ತನಿಖೆ ಮುಂದುವರಿದಿದೆ.

Exit mobile version