ಸೆ.15ರೊಳಗೆ 9ಜಿಲ್ಲೆಗಳ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ತಮಿಳುನಾಡಿಗೆ ಸುಪ್ರೀಂ ಸೂಚನೆ

ನವದೆಹಲಿ,ಜೂ,22: ಸೆಪ್ಟೆಂಬರ್‌ 15ರೊಳಗೆ 9 ಹೊಸ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವಂತೆ ತಮಿಳುನಾಡು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ರಜಾ ಪೀಠವು, 4 ಜಿಲ್ಲೆಗಳನ್ನು ವಿಂಗಡಿಸಿ ಹೊಸ ಜಿಲ್ಲೆಗಳನ್ನಾಗಿ ಪರಿವರ್ತಿಸಲಾಗಿರುವ ಒಂಬತ್ತು ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಿ, ಸೆಪ್ಟೆಂಬರ್‌ 15ರೊಳಗೆ ಫಲಿತಾಂಶ ಪ್ರಕಟಿಸಬೇಕು ಎಂದು ಹೇಳಿದೆ.

ಈ ಸ್ಥಳೀಯ ಸಂಸ್ಥೆಗಳಿಗೆ 4 ತಿಂಗಳೊಳಗೆ ಚುನಾವಣೆ ನಡೆಸುವಂತೆ ನ್ಯಾಯಾಲಯವು 2019ರ ಡಿಸೆಂಬರ್‌ 11ರಂದು ಆದೇಶಿಸಿತ್ತು. ಆದರೆ ಆಯೋಗವು ಇದಕ್ಕಾಗಿ 18 ತಿಂಗಳುಗಳು ತೆಗೆದುಕೊಂಡಿದೆ. 2018–2019ರಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಅಂದಿನಿಂದ ಇಲ್ಲಿ ಯಾವುದೇ ಹೊಸ ಪ್ರತಿನಿಧಿಗಳಿಲ್ಲ. ಒಂದು ವೇಳೆ ಚುನಾವಣಾ ಆಯೋಗವು ನ್ಯಾಯಾಲಯದ ಆದೇಶ ಪಾಲಿಸದಿದ್ದಲ್ಲಿ, ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠವು ಎಚ್ಚರಿಸಿದೆ.

Exit mobile version