ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಜಕ್ಕೂ ವಿಧಾನಸಭಾ ಚುನಾವಣೆಯ ದಿಕ್ಸೂಚಿಯೇ ?

ಇತ್ತೀಚೆಗೆ ನಡೆದ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಗಳು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಎಲ್ಲೋ ಒಂದು ಕಡೆ ಕೆಲವರು ಇದು ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಅಂದಕೊಂಡರೆ ಇನ್ನು ಕೆಲವರು ಇದು ಕೇವಲ ಸ್ಥಳಿಯ ಸಂಸ್ಥೆಗಷ್ಟೆ ಸೀಮಿತ. ಇದು ವಿಧಾನ ಸಭೆ ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುವುದು ಇನ್ನು ಕೆಲವರ ಅಭಿಪ್ರಾಯವಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಕೆಲ ಉಪ ಚುನಾವಣೆಗಳು ಸೇರಿದಂತೆ ಹಲವು ಚುನಾವಣೆಗಳು ನಡೆದಿದ್ದು ಕೆಲವು ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ ಇನ್ನು ಕೆಲವು ಫಲಿತಾಂಶ ಕಾಂಗ್ರೆಸ್‌ಗೆ ಬಲ ತಂದುಕೊಟ್ಟಿರುವುದಂತೂ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಜೆಡಿಎಸ್‌ನ ಕಾರ್ಯವೈಕರಿಗಳು ನಡೆಯದ ಕಾರಣವೋ, ಅಥವಾ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರ ಹೇಳಿಕೆ ಗಳಿಂದಲೋ ಜೆಡಿಎಸ್‌ ಪ್ರತಿ ಚುನಾವಣೆಗಳಲ್ಲೂ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿತ ಕಾಣುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.  

ನಗರ ಸಭೆ ಪಟ್ಟಣ ಪಂಚಾಯಿತಿ, ಪುರಸಭೆಯ ಫಲಿತಾಂಶ ನೋಡುವುದಾದರೆ  19 ಪುರಸಭೆಗಳ ಪೈಕಿ 8ರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ, ತೀವ್ರ ಪೈಪೋಟಿ ನಿಡಿದ್ದ ಬಿಜೆಪಿ 6ರಲ್ಲಿ ಗೆಲವು ಸಾಧಿಸಿದರೆ ಒಂದು ಪುರಸಭೆಯನ್ನು ಜೆಡಿಎಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ  ಜೊತೆಗೆ 4 ಪುರಸಭೆಯು ಅತಂತ್ರವಾಗಿದೆ.

ರಾಜ್ಯದ 34 ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದ  ಸ್ಪಷ್ಟ ಚಿತ್ರಣವೂ ಕೂಡ ನಮ್ಮ ಮುಂದಿದ್ದು 34 ಪಟ್ಟಣ ಪಂಚಾಯಿತಿಗಳ ಪೈಕಿ 16ರಲ್ಲಿ ಕಾಂಗ್ರೆಸ್ ಜಯಬೇರಿ ಭಾರಿಸಿದ್ದು, ಬಿಜೆಪಿ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದೆ. ಬಿಜೆಪಿಗೆ ಹೋಲಿಸಿದರೆ ಪಕ್ಷೇತರರೆ ಮುಂದಿದ್ದು 16 ಪಟ್ಟಣ ಪಂಚಾಯಿತಿಗಳನ್ನು ಪಕ್ಷೇತರ ಅಭ್ಯರ್ಥಿಗಳು ವಶಪಡಿಸಿಕೊಂಡಿದ್ದಾರೆ. ಪಟ್ಟಣ ಪಂಚಾಯಿತಿಯ  577 ವಾರ್ಡ್‌ ಪೈಕಿ 236ರಲ್ಲಿ ಕಾಂಗ್ರೆಸ್‌ಗೆ ಜಯಗಳಿಸಿದೆ. 194 ವಾರ್ಡ್‌ನಲ್ಲಿ ಬಿಜೆಪಿ, 135 ವಾರ್ಡ್‌ನಲ್ಲಿ ಪಕ್ಷೇತರರು ಹಾಗೂ ಕೇವಲ 12 ವಾರ್ಡ್‌ಗಳಲ್ಲಿ ಜೆಡಿಎಸ್‌ ಗೆಲವು ಸಾಧಿಸುವಲ್ಲಿ ಸಫಲವಾಗಿದೆ.

ರಾಜ್ಯದಲ್ಲಿ  5 ನಗರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 3ರಲ್ಲಿ ಗೆದ್ದು ಬೀಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗೆಲವು ಸಾಧಿಸುವಲ್ಲಿ ವಿಫಲವಾಗಿವೆ. ಜೊತೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ತುಮಕೂರು ಜಿಲ್ಲೆಯ ಶಿರಾ 2 ನಗರಸಭೆ ಅತಂತ್ರವಾಗಿದೆ.

ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಪ್ರಕಾರ ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಇದ್ದರೂ ಕೂಡ ಇದು ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕಿಂತ ಮುಖ್ಯವಾಗಿ ಜಾತಿ, ಅಭ್ಯರ್ಥಿಯ ಹಿನ್ನಲೆ, ಸ್ಥಳೀಯರೊಂದಿಗಿನ ಅಭ್ಯರ್ಥಿಯ ಒಡನಾಟ ಇದೆಲ್ಲವೂ ಕೂಡ ಅಭ್ಯರ್ಥಿಯ ಆಯ್ಕೆಯಲ್ಲಿ ಪರಿಗಣನೆಯಾಗುತ್ತದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು ಆದರೆ ಕೊನೆಯ ಹಂತದಲ್ಲಿ ಬಿಜೆಪಿ ಬಹುಮತದೊಂದಿಗೆ ವಿಧಾನ ಪರಿಷತ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಯಿತು. ಆದರೆ ಜೆಡಿಎಸ್‌ ಮಾತ್ರ ಕುಟುಂಬ ರಾಜಕಾರಣಕ್ಕೆ ಒತ್ತು ಕೊಟ್ಟಷ್ಟು ಪಕ್ಷ ಸಂಘಟನೆಗೆ ಒತ್ತು ಕೊಡುತ್ತಿಲ್ಲ ಎಂಬ ಆರೋಪದ ನಡುವೆ ಎಲ್ಲಾ ಚುನಾವಣೆಗಳಲ್ಲೂ 3 ನೇ ಸ್ಥಾನಕ್ಕೆ ಕುಸಿಯುತ್ತಿರುವುದು ನಮ್ಮ ಕಣ್ಮುಂದಿನ ಸತ್ಯವಾಗಿದೆ. ಜೆಡಿಎಸ್‌ ಇನ್ನೊಮ್ಮೆ ಪುಟಿದೇಳಬೇಕಾದರೆ  ಇನ್ನು 16 ತಿಂಗಳಲ್ಲಿ ರಾಜ್ಯಾದ್ಯಂತ ತನ್ನ ಪಕ್ಷವನ್ನು ಕಟ್ಟಿ ಬೆಳೆಸಬೇಕಾದ ಜವಾಬ್ದಾರಿ ಪಕ್ಷದ ನಾಯಕರ ಮೇಲಿದೆ.

 ನಗರ ಸಭೆ  ಒಟ್ಟು ವಾರ್ಡಗಳ ಫಲಿತಾಂಶ ನೋಡುವುದಾದರೆ 67 ವಾರ್ಡ್‌ಗಳಲ್ಲಿ ಬಿಜೆಪಿ 61 ರಲ್ಲಿ  ಕಾಂಗ್ರೆಸ್ 12 ರಲ್ಲಿ ಜೆಡಿಎಸ್ ಹಾಗೂ  26 ಕ್ಷೇತ್ರಗಳಲ್ಲಿ ಇತರರು ಗೆಲುವು ಸಾಧಿಸಿದ್ದಾರೆ. ಪುರಸಭೆಯ ಫಲಿತಾಂಶ ನೋಡುವುದಾದರೆ  173 ವಾರ್ಡ್‌ಗಳಲ್ಲಿ ಬಿಜೆಪಿ  200ರಲ್ಲಿ ಕಾಂಗ್ರೆಸ್‌,  ಜೆಡಿಎಸ್‌ 21 ಹಾಗೂ ಪಕ್ಷೇತರರು 41 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ

ಪಟ್ಟಣ ಪಂಚಾಯಿತಿಯ ಫಲಿತಾಂಶ ನೋಡುವುದಾದರೆ ಬಿಜೆಪಿ 194, ಕಾಂಗ್ರೆಸ್ 238, ಜೆಡಿಎಸ್‌ 12 ಮತ್ತು  138ಕ್ಷೇತ್ರಗಳಲ್ಲಿ ಪಕ್ಷೇತರರು ಭರ್ಜರಿಗೆಲುವು ದಾಖಲಿಸಿದ್ದಾರೆ. ಎಲ್ಲೋ ಒಂದು ಕಡೆ ಸ್ಥಳೀಯ ಫಲಿತಾಂಶ ನೋಡುವುದಾದರೆ ಕಾಂಗ್ರೆಸ್‌ ಇದರಲ್ಲಿ ಮುನ್ನಡೆ ಸಾಧಿಸಿದ್ದರೂ ಕೂಡ ಇದು ವಿಧಾನ ಸಭೆಯ ಮೇಲೆ 100% ಅಷ್ಟು ಪರಿಣಾಮ ಬೀರಲಿದೆ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ಸ್ಥಳೀಯ ಸಂಸ್ಥೆಯ ಮುನ್ನಡೆ ಸಾಧಿಸಿದ ಪಕ್ಷವು ಇದು ಮುಂದಿನ ವಿಧಾನ ಸಭಾ ಫಲಿತಾಂಶ ಎಂದು ಹೇಳುವುದು ಸ್ವಾಭಾವಿಕ. ಸಿದ್ದರಾಮಯ್ಯ ಕೂಡ ಈ ಫಲಿತಾಂಶದ ಬಗ್ಗೆ ಹಾಗೆ ಹೇಳಿರುವುದರಲ್ಲಿ ಅಚ್ಚರಿಯೇನಿಲ್ಲ. ಸ್ಥಳೀಯ ಸಂಸ್ಥೆಗಳ  ಫಲಿತಾಂಶವು ವಿಧಾನಸಭಾ ಚುನಾವಣೆಯ ಮೇಲೆ ಎಷ್ಟರಮಟ್ಟಿಗೆ ಫಲಿತಾಂಶ ಬೀರುತ್ತದೆ ಎಂಬುವುದು ಬೇರೆ ವಿಚಾರ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಆದರೆ ಮುಂದಿನ ವರ್ಷ ನಡೆಯವ ವಿಧಾನ ಸಭಾ ಚುನಾವಣೆಯು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ನೇರ ಹಣಾಹಣಿ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

 

 

 

 

 

 

Exit mobile version