ಜೂನ್​ 7ರ ವರೆಗೆ ಎಂದಿನಂತೆ ಲಾಕ್​ಡೌನ್​ ಮುಂದುವರೆಯುತ್ತದೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ. 29: ಸದ್ಯಕ್ಕೆ ರಾಜ್ಯದಲ್ಲಿ ಹೇರಲಾಗಿರುವ ಲಾಕ್​ಡೌನ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಜೂನ್​ 7ರ ವರೆಗೆ ಎಂದಿನಂತೆ ಲಾಕ್​ಡೌನ್​ ಮುಂದುವರೆಯುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಜೂನ್​ 1ರಿಂದ ರಾಜ್ಯದಲ್ಲಿ ಲಾಕ್​ಡೌನ್​ ​ ಸಡಿಲಿಕೆಯಾಗುತ್ತೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆ ಗೃಹ ಸಚಿವರು ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಲಾಕ್​​ಡೌನ್​​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಜೂನ್ 7 ರ ವರೆಗೆ ಇರುವ ಲಾಕ್​ಡೌನ್ ನನ್ನು ನಾವು ಪೂರ್ಣಗೊಳಿಸ್ತೇವೆ ಎಂದು ಹೇಳಿದ್ದಾರೆ. ಮುಂದುವರೆದ ಅವರು, ಈಗಾಗಲೇ ಕೇಂದ್ರ ಗೃಹ ಇಲಾಖೆ ಜೂನ್ 30ರ ತನಕ ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ.  ಹೀಗಾಗಿ ಈ ಬಗ್ಗೆ ರಾಜ್ಯದಲ್ಲಿ ಅನುಷ್ಠಾನ ಮಾಡುವ ಸಂಬಂಧ ಸಭೆ ನಡೆಸಲು ನಿರ್ಧರಿಸಲಾಗಿದೆ.  ಹೀಗಾಗಿ ಎಲ್ಲಾ ಸಚಿವರ ಜೊತೆ ಸಿಎಂ ಸಭೆ ನಡೆಸಲು ತೀರ್ಮಾನ ಮಾಡಿದ್ದಾರೆ. ಸಿಎಂ ಶೀಘ್ರವೇ ಸಚಿವರ ಜೊತೆ ಸಭೆ ನಡೆಸಿ, ತೀರ್ಮಾನ ಮಾಡಲಿದ್ದಾರೆ ಎಂದರು.

ಆದರೆ ಜೂನ್ 7ರವರೆಗೆ ಇರುವ ಲಾಕ್​ಡೌನ್​ನಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ ಎಂದು ಲಾಕ್​ಡೌನ್ , ಅನ್ ಲಾಕ್ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದರು. ಇವಾಗ ಪಾಸಿಟಿವ್ ದರ ಶೇಕಡ 10ಕ್ಕಿಂತ ಹೆಚ್ಚಿದೆ. 10 ಕ್ಕಿಂತ ಕಡಿಮೆ ಬರುವ ತನಕ ಲಾಕ್​ಡೌನ್ ನಲ್ಲಿ ಸಡಿಲಿಕೆ ಇಲ್ಲ. ಇವಾಗಿರುವ ಕಠಿಣ ನಿಯಮಗಳೇ ಮುಂದುವರೆಯಲಿವೆ.  ನಮಗೆ ಇರುವ ಗುರಿ ಸೋಂಕು ಕಡಿಮೆ ಪ್ರಮಾಣ ಕಡಿಮೆ ಮಾಡೋದು ಎಂದರು.

ನಿನ್ನೆ ಜಿಎಸ್ಟಿ ಕೌನ್ಸಿಲ್ ಸಭೆ ನಡೆದಿದೆ. ಸಭೆಯಲ್ಲಿ ಕರ್ನಾಟಕದ ಜಿಎಸ್​ಟಿ ಪಾಲು ಕೊಡುವಂತೆ ಒತ್ತಾಯ ಮಾಡಲಾಗಿದೆ. 11,000 ಕೋಟಿ ಕೊಡುವಂತೆ ಒತ್ತಡ ಹೇರಲಾಗಿದೆ.  ಅದನ್ನು ಕೇಂದ್ರ ಸರ್ಕಾರ ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಅದಲ್ಲದೆ ಲಾಕ್​ಡೌನ್ ಸಂಕಷ್ಟದಲ್ಲಿ ಉಂಟಾಗಿರುವ ಆರ್ಥಿಕ ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಕಳೆದ ಬಾರಿಯ ಲಾಕ್​ಡೌನ್​ನಲ್ಲೂ ಕೂಡ ಸಾಕಷ್ಟು ನಷ್ಟ ಉಂಟಾಗಿತ್ತು. ಈ ಬಾರಿಯ ಲಾಕ್​ಡೌನ್​ನಿಂದ ಸಾಕಷ್ಟು ನಷ್ಟ ಆಗುವ ಸಾಧ್ಯತೆ ಇದೆ ಎಂದರು. ಈ ಬಗ್ಗೆ ತಜ್ಞರು ಸಮಿತಿ ವರದಿ ಪಡೆದು, ಮುಂದಿನ ಸಭೆಯಲ್ಲಿ ಪರಿಹಾರ ಪ್ರಮಾಣ ನಿಗದಿ ಮಾಡುವ ನಿರೀಕ್ಷೆ ಇದೆ.  ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೆರವು ನೀಡುವ ನಿರೀಕ್ಷೆಯಿದೆ. ಮತ್ತೊಮ್ಮೆ ರಾಜ್ಯಕ್ಕೆ ಅಗತ್ಯ ವಿರುವ ಪರಿಹಾರ ಗಳ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿ ಒತ್ತಾಯ ಮಾಡುತ್ತೇವೆ ಎಂದು ಗೃಹ ಹಾಗೂ ಕಾನೂನು ಸಂಸದೀಯ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದೆ. ಒಂದೆರೆಡು ದಿನಗಳಲ್ಲಿ ಪ್ರಕರಣದ ಹಿನ್ನೆಲೆ ಹಾಗೂ ಸ್ಪಷ್ಟ ಚಿತ್ರಣ ದೊರಕಲಿದೆ ಎಂದರು.

ಸೋಂಕು ಹೆಚ್ಚಿರುವ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಸಿಎಂ ಬಿ.ಎಸ್.​ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸುತ್ತಿದ್ದಾರೆ. ಶಾಸಕರು, ಸಂಸದರು, ಪರಿಷತ್ ಸದಸ್ಯರು, ರಾಜ್ಯಸಭೆ ಸದಸ್ಯರ ಜೊತೆ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಸಂವಾದ ನಡೆಸುತ್ತಿದ್ದಾರೆ. ಮೈಸೂರು, ಹಾಸನ, ಬೆಳಗಾವಿ, ಕಲ್ಬುರ್ಗಿ, ಮತ್ತು ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆಗಳಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಮಹತ್ವದ ಸಮಾಲೋಚನೆ ನಡೆಸುತ್ತಿದ್ದಾರೆ. ವಿಡಿಯೋ ಕಾನ್ಪೆರೆನ್ಸ್ ನಲ್ಲಿ ಡಿಸಿಎಂ ಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಸಚಿವ ಆರ್ ಅಶೋಕ್, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

Exit mobile version