Chikkaballapura: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಭಾರೀ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇಡೀ ಕ್ಷೇತ್ರದಾದ್ಯಂತ ಪಕ್ಷ ಸಂಘಟನೆಯಲ್ಲಿ ಅನೇಕ ಆಕಾಂಕ್ಷಿಗಳು ತೊಡಗಿಕೊಂಡಿದ್ದು, ಟಿಕೆಟ್ ಪಡೆದುಕೊಳ್ಳಲು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರರ ಮನದಾಳ ಅರಿಯಲು ಮೂರು ಪಕ್ಷಗಳು ಸದ್ದಿಲ್ಲದೇ ಸಮೀಕ್ಷೆಗಳನ್ನು ನಡೆಸುತ್ತಿವೆ.

2019ರವೆರೆಗೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ (BJP) ಗೆದ್ದು ಬೀಗಿತ್ತು. ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ (Congress) ನಾಯಕರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮಾಜಿ ಸಂಸದ ವೀರಪ್ಪಮೊಯ್ಲಿ ಮತ್ತೊಮ್ಮೆ ಟಿಕೆಟ್ ಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರೊಂದಿಗೆ ರಕ್ಷಾರಾಮಯ್ಯ, ಮಾಜಿ ಸಚಿವ ಶಿವಶಂಕರ್ರೆಡ್ಡಿ ಸಹ ಟಿಕೆಟ್ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಇನ್ನು ಬಿಜೆಪಿ ಮತ್ತು ಜೆಡಿಎಸ್ನಲ್ಲೂ (JDS) ಅನೇಕ ನಾಯಕರು ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಜೆಡಿಎಸ್-ಬಿಜೆಪಿ ನಡುವೆ ಮೈತ್ರಿಯಾದರೇ, ಈ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎಂಬ ಗೊಂದಲ ಎದ್ದಿದೆ. ಬಿಜೆಪಿಯಲ್ಲೂ ಸಾಕಷ್ಟು ಆಕಾಂಕ್ಷಿಗಳ ಪಡೆಯಿದ್ದು, ಜೆಡಿಎಸ್ ಮೈತ್ರಿ ನಿರ್ಧಾರದ ಮೇಲೆ ಎಲ್ಲರ ಭವಿಷ್ಯ ನಿಂತಿದೆ.

ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ @BNBacchegowda ರಾಜಕೀಯ ನಿವೃತ್ತಿ ಘೋಷಣೆಯಾದ ಹಿನ್ನೆಲೆ ಚಿಕ್ಕಬಳ್ಳಾಪುರ ಬಿಜೆಪಿ ಟಿಕೆಟ್ಗಾಗಿ ಅನೇಕರು ಪ್ರಯತ್ನಿಸುತ್ತಿದ್ದಾರೆ. ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್, ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎನ್.ಸಂತೋಷ್ (B N Santhosh) ಆಪ್ತ ಬಿಜ್ಜವರ ಲೋಕೇಶ್ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಚಿಕ್ಕಬಳ್ಳಾಪುರದ #Chikkaballapura ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿ ಹೊರಹೊಮ್ಮಿದರೂ, ಈ ಬಾರಿ ಆಕಾಂಕ್ಷಿಗಳೆಂದು ಘೋಷಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇನ್ನು ಅಚ್ಚರಿ ಎಂದರೆ ಸಿಪಿಐ(ಎಂ)ಗೆ ಚಿಕ್ಕಬಳ್ಳಾಪುರದಲ್ಲಿ 20ರಿಂದ 30 ಸಾವಿರ ಮತಗಳಿವೆ. ಹೀಗಾಗಿ ಸಿಪಿಐ(ಎಂ) ಅಭ್ಯರ್ಥಿ ಹಾಕುತ್ತಾ ಅಥವಾ ಯಾರಿಗಾದರೂ ಎಂಬಲ ನೀಡುತ್ತಾ ಎಂಬುದು ಕೂಡಾ ಮುಖ್ಯವಾಗಿದೆ. ಜತೆಗೆ, ಈ ಬಾರಿ ಆಮ್ ಆದ್ಮಿ ಪಕ್ಷ, ಯುಪಿಪಿ (UPP), ಕೆಎಸ್ಆರ್ ಸೇರಿದಂತೆ ಕೆಲ ಚಿಕ್ಕ ಪಕ್ಷಗಳು ಚುನಾವಣೆಯಲ್ಲಿ ಸದ್ದು ಮಾಡಲು ತಯಾರಿ ಆರಂಭಿಸಿವೆ.