ಲಾರಿಯಲ್ಲಿದ್ದ ಜಿಲೆಟಿನ್ ಸ್ಪೋಟ; ಎಂಟಕ್ಕೂ ಹೆಚ್ಚು ‌ಮಂದಿ ದುರ್ಮರಣ

ಶಿವಮೊಗ್ಗ, ಜ. 22: ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಕೇಳಿಬಂದ ಭಾರೀ ಶಬ್ದಕ್ಕೆ ಕಾರಣ ತಿಳಿದು ಬಂದಿದ್ದು, ಲಾರಿಯಲ್ಲಿ ಸಾಗಿಸುತ್ತಿದ್ದ ಜಿಲೆಟಿನ್ ಸ್ಪೋಟಗೊಂಡ ಪರಿಣಾಮ ಎಂಟು ಮಂದಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಇಲ್ಲಿನ ಹುಣಸೋಡು ಬಳಿಯ ಕಲ್ಲಿನ ಕ್ವಾರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಗುರುವಾರ ರಾತ್ರಿ 10:30ರ ವೇಳೆಯಲ್ಲಿ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸದ್ದು ಕೇಳಿಬಂದಿತ್ತು. ಇದು ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ ಜನರಲ್ಲಿ ಆತಂಕ ಸೃಷ್ಠಿಸಿತ್ತು. ಭಾರೀ ಸದ್ದು ಎಲ್ಲಿಂದ ಕೇಳಿಬಂದಿತ್ತು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲದ ಕಾರಣ, ಹಲವರು ಭೂಕಂಪದ ಅನುಮಾನವನ್ನು ವ್ಯಕ್ತಪಡಿಸಿದ್ದರು.

ಆದರೆ, ಕಲ್ಲು ಗಣಿಗಾರಿಕೆ ನಡೆಸಲು ಬಳಸುವ ಸಲುವಾಗಿ ಜಿಲೆಟಿನ್ ಕಡ್ಡಿಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಲಾರಿ ಏಕಾಏಕಿ ಸ್ಪೋಟಗೊಂಡ ಪರಿಣಾಮ ಈ ಸದ್ದು ಕೇಳಿಬಂದಿದೆ. ಘಟನೆಯಲ್ಲಿ ಬಿಹಾರ ಮೂಲದ ‌ಎಂಟು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಸ್ಪೋಟದ ತೀವ್ರತೆಗೆ ಲಾರಿ ಸಂಪೂರ್ಣ ಛಿದ್ರಗೊಂಡಿದ್ದರೆ. ಲಾರಿಯಲ್ಲಿ ಇದ್ದವರ ಮೃತದೇಹಗಳು ಸಹ ಗುರುತೇ ಸಿಗದಷ್ಟು ಛಿದ್ರಗೊಂಡಿದ್ದು, ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿದೆ.

ಘಟನೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸ್ಥಳಕ್ಕೆ ದೌಡಾಯಿಸಿದರು. ಬಳಿಕ ಛಿದ್ರವಾಗಿ ಬಿದ್ದಿದ್ದ ಮೃತದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗದ ‌ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಘಟನೆ ನಡೆದ ಪ್ರದೇಶದಲ್ಲಿ ಕತ್ತಲು ಆವರಿಸಿದ್ದ ಕಾರಣ‌ ಕಾರ್ಯಾಚರಣೆಗೆ ಅಡ್ಡಿಯಾಯಿತು. ಈ ನಡುವೆ ಸ್ಪೋಟದ ತೀವ್ರತೆ ಗಮನಿಸಿದರೆ ಘಟನೆಯಲ್ಲಿ ಮೃತಪಟ್ಟವರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಕಾರ್ಯಾಚರಣೆ ಮುಂದುವರಿದಿದೆ.

Exit mobile version