ಶ್ರದ್ಧಾ ಭಕ್ತಿಯಿಂದ ನೆರವೇರಿದ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರಾ ಮಹಾರಥೋತ್ಸವ

ಚಾಮರಾಜನಗರ, ಮಾ. 15: ಐತಿಹಾಸಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಮಾದಪ್ಪನ ಶಿವರಾತ್ರಿ ಜಾತ್ರೆಯ ಮಹಾ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಪ್ರತಿವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗುತ್ತಿದ್ದ ಮಹಾರಥೋತ್ಸವ ಕೊರೊನಾ ನಿಯಮಾವಳಿ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಸಮ್ಮುಖದಲ್ಲಿ ನೆರವೇರಿತು. ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ರಥೋತ್ಸವಕ್ಕೂ ಮುನ್ನ ಬೇಡಗಂಪಣ ಅರ್ಚಕರಿಂದ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಬಳಿಕ ಅರ್ಚಕರ ತಂಡ ಉತ್ಸವಮೂರ್ತಿಯನ್ನು ಸಿದ್ಧಗೊಳಿಸಿ ಬಿಳಿ ಆನೆ ವಾಹನದ ಮೇಲಿಟ್ಟು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳನ್ನು ಮಂಗಳವಾದ್ಯ ಸಮೇತ ದೇವಾಲಯಕ್ಕೆ ಕರೆತರಲಾಯಿತು. ಬಳಿಕ ಉತ್ಸವಮೂರ್ತಿಯನ್ನು ಸತ್ತಿಗೆ -ಸುರಪಾನಿ, ಜಾಗಟೆ, ಮಂಗಳವಾದ್ಯ ಸಮೇತ ದೇವಾಲಯದ ಹೊರಾಂಗಣದಲ್ಲಿ ವಿವಿಧ ಬಗೆಯ ಪುಷ್ಪ, ತಳಿರು-ತೋರಣ, ಬಣ್ಣ-ಬಣ್ಣದ ಬಟ್ಟೆಗಳಿಂದ ಅಲಂಕೃತಗೊಳಿಸಿ ಸಿದ್ಧಗೊಳಿಸಲಾಗಿದ್ದ ಮಹಾರಥೋತ್ಸವದ ಬಳಿಗೆ ತಂದು ರಥೋತ್ಸವದಲ್ಲಿ ಇಡಲಾಯಿತು.

ಬೂದುಗುಂಬಳಕಾಯಿಯಿಂದ ಆರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಹಸಿರು ಸೀರೆ ಮತ್ತು ಕುಪ್ಪಸ ಧರಿಸಿದ್ದ ಬೇಡಗಂಪಣ ಹೆಣ್ಣುಮಕ್ಕಳು ಬೆಲ್ಲದ ಆರತಿ ಬೆಳಗುವ ಮೂಲಕ ರಥೋತ್ಸವಕ್ಕೆ ಮೆರುಗು ತಂದರು. ಮಹಾರಥೋತ್ಸವದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ನಾಗರಾಜು ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Exit mobile version