ಮಹಾಮಾರಿ ಕೊರೊನಾ ಎಫೆಕ್ಟ್‌: ಮಲೆ ಮಹದೇಶ್ವರ ಬೆಟ್ಟದಲ್ಲಿ ಉಗಾದಿ ರಥೋತ್ಸವ ರದ್ದು

ಚಾಮರಾಜನಗರ, ಏ. 10: ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ಏಪ್ರಿಲ್ 13 ರಂದು ನಡೆಯಬೇಕಾಗಿದ್ದ ರಥೋತ್ಸವವನ್ನು ರದ್ದುಗೊಳಿಸಲಾಗಿದೆ.

ಕೊರೋನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ರಥೋತ್ಸವ ನಡೆಯುವುದೇ ಅನುಮಾನವಾಗಿತ್ತು ಮತ್ತು ದೇವಾಲಯ ಪ್ರಾಧಿಕಾರವು ಶನಿವಾರ ಈ ಬಗ್ಗೆ ತೀರ್ಮಾನ ಪ್ರಕಟಿಸುವುದಾಗಿ ಹೇಳಿತ್ತು. ದೇವಾಲಯದ ಎದುರು ರಥವನ್ನೂ ತಂದು ನಿಲ್ಲಿಸಲಾಗಿತ್ತು. 500 ಜನರಿಗೆ ಸೀಮಿತವಾಗಿ ಸಂಪ್ರದಾಯದಂತೆ ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅನುಮತಿ ನೀಡಿದ್ದರು.

ಆದರೆ, ರಥೋತ್ಸವ ಸಂದರ್ಭದಲ್ಲಿ 30 ಜನ ಅರ್ಚಕರು, ಕಳಸ ಹೊತ್ತ 108 ಹೆಣ್ಣುಮಕ್ಕಳು, ಕುಟುಂಬಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಸೇರಿದಂತೆ ಸುಮಾರು 2ರಿಂದ 3 ಸಾವಿರ ಜನ ಸೇರುವ ಅವಕಾಶವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಥೋತ್ಸವವನ್ನು ರದ್ದು ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾದಾಗಿನಿಂದ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವವನ್ನು ರದ್ದು ಮಾಡಿರಲಿಲ್ಲ. ಕಳೆದ ವರ್ಷ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಯುಗಾದಿ ಜಾತ್ರಾ ರಥೋತ್ಸವವನ್ನು ರದ್ದು ಮಾಡಲಾಗಿತ್ತು. ಈ ಬಾರಿ ರಥೋತ್ಸವಕ್ಕೆ ಅವಕಾಶ ನೀಡಿದ್ದರು ಸಹ ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಎರಡನೇ ಬಾರಿ ಯುಗಾದಿ ಜಾತ್ರಾ ರಥೋತ್ಸವ ಮಾಡಲಾಗಿದೆ ಎಂದು ತಿಳಿದು ಬಂದಿದೆ

Exit mobile version