ಮಹಾರಾಷ್ಟ್ರ ಬೆಂಕಿ ದುರಂತ: ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮುಂಬೈ, ಏ. 23: ಮಹಾರಾಷ್ಟ್ರದ ವಿರಾರ್​ನಲ್ಲಿ ಇಂದು ಬೆಗಿನ ಜಾವ ಕೋವಿಡ್-19 ಆಸ್ಪತ್ರೆಯಲ್ಲಿ ಶಾರ್ಟ್​ ಸರ್ಕ್ಯೂಟ್ ಆಗಿದ್ದರಿಂದ ಬೆಂಕಿ ಕಾಣಿಸಿಕೊಂಡಿತ್ತು. ಐಸಿಯುನಲ್ಲಿದ್ದ ಎಸಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ 13 ಕೊರೋನಾ ರೋಗಿಗಳು ಸಜೀವ ದಹನವಾಗಿದ್ದರು.

ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಬೆಂಕಿ ಅವಘಡದಲ್ಲಿ ಮೃತಪಟ್ಟ 13 ರೋಗಿಗಳ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ವಾಸೈನ ಆಸ್ಪತ್ರೆಯ ಐಸಿಯುನಲ್ಲಿದ್ದ ಏರ್​ ಕಂಡೀಷನರ್​ (ಎಸಿ)ನಲ್ಲಿ ಶಾರ್ಟ್​ ಸರ್ಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಹೊತ್ತಿದೆ ಎನ್ನಲಾಗಿದೆ. ಐಸಿಯುನಲ್ಲಿ 17 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 13 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ತುರ್ತಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶ ನೀಡಿದ್ದಾರೆ.

ಬೆಂಕಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ ಘೋಷಣೆಯಾದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿ ಕುಟುಂಬಕ್ಕೂ 5 ಲಕ್ಷ ರೂ. ಘೋಷಿಸಲಾಗಿದೆ.

Exit mobile version