ಮಹಾತ್ಮಾ ಗಾಂಧೀಜಿಯವರ ಮರಿಮೊಮ್ಮಗ ವಿಧಿವಶ

ಜೋಹಾನ್ಸ್ ಬರ್ಗ್, . 23: ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಗಾಂಧೀಜಿಯವರ ಮರಿ ಮೊಮ್ಮಗ ಸತೀಶ್ ಧುಪಾಲಿಯಾ ಅವರು ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಮೂರು ದಿನಗಳ ಹಿಂದೆಯಷ್ಟೇ 66ನೇ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದರು.  ಸತೀಶ್ ಧುಪಾಲಿಯಾರಿಗೆ ಕೊವಿಡ್-19 ಸೋಂಕು ತಗುಲಿದ್ದು, ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಕೊರೊನಾವೈರಸ್ ಸೋಂಕಿನಿಂದಲೇ ಸತೀಶ್ ಧುಪಾಲಿಯಾ ಮೃತಪಟ್ಟಿರುವ ಬಗ್ಗೆ ಅವರ ಸಹೋದರಿ ಉಮಾ ಧುಪಾಲಿಯಾ ಮೇಸ್ತ್ರಿ ತಿಳಿಸಿದ್ದಾರೆ.  ಒಂದು ತಿಂಗಳ ಹಿಂದೆ  ಸತೀಶ್ ಧುಪಾಲಿಯಾ ಅವರು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದಲೂ ನ್ಯುಮೋನಿಯಾದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಸಹೋದರ ಮೃತಪಟ್ಟಿದ್ದಾರೆ. ಇತ್ತೀಚಿಗೆ ಅವರಲ್ಲಿ ಕೊವಿಡ್-19 ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಹೋದರ ಸತೀಶ್ ಧುಪಾಲಿಯಾ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ” ಎಂದು ಉಮಾ ಧುಪಾಲಿಯಾ ಮೇಸ್ತ್ರಿ ಹೇಳಿದ್ದಾರೆ.

 ಧುಪಾಲಿಯಾ ಸಹೋದರ ಸಹೋದರಿಯರು ಮಹಾತ್ಮ ಗಾಂಧೀಜಿಯವರ ಗೌರವಾರ್ಥವಾಗಿ ನಡೆಯುತ್ತಿರುವ ಸಾಮಾಜಿಕ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಇನ್ನು ಸತೀಶ್ ಧುಪಾಲಿಯಾ ಅವರು ಮಾಧ್ಯಮ ಲೋಕದಲ್ಲಿ  ತಮ್ಮನ್ನು ತೊಡಗಿಸಿಕೊಂಡಿದ್ದರು. ಮಹಾತ್ಮ ಗಾಂಧೀಜಿ ಅಭಿವೃದ್ಧಿ ಟ್ರಸ್ಟ್ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅವರು ಉತ್ತಮ ವಿಡಿಯೋ ಗ್ರಾಫರ್ ಕೂಡಾ ಆಗಿದ್ದರು. ಸಾಮಾಜಿಕ ಅಭಿವೃದ್ಧಿ ಸಂಸ್ಥೆಗಳು ಮತ್ತು ಸಮುದಾಯಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸತೀಶ್ ಧುಪಾಲಿಯಾ ತಮ್ಮನ್ನು ತೊಡಗಿಸಿಕೊಂಡಿದ್ದರು.

Exit mobile version