ಹಿಮವನ್ನು ಹೊದ್ದು ಮಲಗಿರುವ ಭೂಲೋಕದ ಸ್ವರ್ಗ `ಮನಾಲಿ’!

himachal pradesh

ಮನಾಲಿ(Manali) ಭಾರತದ(India) ಹಿಮಾಚಲ ಪ್ರದೇಶ(Himachal Pradesh)ರಾಜ್ಯದಲ್ಲಿರುವ ಒಂದು ಸುಂದರ ಗಿರಿಧಾಮ. ೧೯೯೦ ಮೀ ಎತ್ತರದಲ್ಲಿರುವ ‘ಮನಾಲಿ’ಯು, ಕುಲು ಜಿಲ್ಲೆಯ ಗಡಿಯಲ್ಲಿರುವ ಇನ್ನೊಂದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಕುಲುವಿನಿಂದ ಕೇವಲ ೪೫೦ ಕಿ.ಮೀ. ದೂರದಲ್ಲಿದೆ. ಸದಾ ಮಂಜಿನಿಂದ ಅವೃತವಾಗಿರುವ ಪರ್ವತಗಳಿಂದಾಗಿ ಇಲ್ಲಿಯ ಕಣಿವೆಗಳಿಗೆ ‘ಬೆಳ್ಳಿಯ ಕಣಿವೆ’ಗಳು ಎಂಬ ಹೆಸರು ಬಂದಿದೆ.

ಬೇಸಗೆಯಲ್ಲೂ ಹಿತವಾದ ಹಾಗೂ ಆಹ್ಲಾದಕರವೆನಿಸುವ ಈ ಪ್ರದೇಶದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೩೦೦೦೦. ಇದು ಭಾರತದ ಒಂದು ಸಾಂಸ್ಕೃತಿಕ(ಸಪ್ತ ಋಷಿಗಳು ನೆಲೆಸಿದ) ನೆಲೆವೀಡು ಎನಿಸಿದೆ. ‘ಮನು ಸ್ಮೃತಿ’ಯನ್ನು ರಚಿಸಿದ ‘ಮನು ನಿಲಯ’ವೇ ಕಾಲಕ್ರಮೇಣ ‘ಮನಾಲಿ’ ಆಯಿತೆಂಬ ಪ್ರತೀತಿಯಿದೆ. ಅದಕ್ಕೆ ಪೂರಕವಾಗಿ ಇಲ್ಲಿ ಮನುವಿನ ಹೆಸರಿಗೆ ಅರ್ಪಿಸಲ್ಪಟ್ಟ ಪುರಾತನ ದೇವಾಲಯವೊಂದಿದೆ. ಮನಾಲಿ ಕಣಿವೆಯನ್ನು ‘ದೇವರ ಕಣಿವೆ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಮನಾಲಿಯಲ್ಲಿ ಎಷ್ಟು ದಿನ ತಂಗಿದರೂ ನೋಡಿ ಮುಗಿಸಲಾರದಷ್ಟು ತಾಣಗಳಿವೆ. ವಿವಿಧ ಅಭಿರುಚಿ ಇದ್ದವರಿಗೆ ವಿವಿಧ ತಾಣಗಳಿವೆ. ರೋಟಂಗ್ ಪಾಸ್ ನ ಪ್ರಕೃತಿ ಸೌಂದರ್ಯ, ಕುಲು ಮನಾಲಿಯ ಸುಂದರ ತಾಣಗಳು, ಬೆಟ್ಟದ ಮೇಲಿನ ಹಿಡಿಂಬಾ ದೇಗುಲ ಹೀಗೆ ಸಾಮಾನ್ಯವಾಗಿ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳೂ ಇವೆ. ಸಾಹಸಿಗರಿಗೆ ಗುಡ್ಡದ ಮೇಲಿನಿಂದ ಪ್ಯಾರಾ ಗ್ಲೈಡಿಂಗ್, ನದಿಗಳಲ್ಲಿ ದೋಣಿಯಾನ ಮಾಡಬಹುದು. ಚಾರಣಿಗರಿಗೆ ಕಣಿವೆಗಳ ಸೌಂದರ್ಯ ಕೈಬೀಸಿ ಕರೆಯುತ್ತವೆ.


ಮನಾಲಿಯ ಮಳಿಗೆಗಳು ಮತ್ತು ರಸ್ತೆಯ ಮಾರುಕಟ್ಟೆಗಳಲ್ಲಿ ಮನದಣಿಯ ಶಾಪಿಂಗ್ ಮಾಡಬಹುದು. ಸ್ಥಳೀಯ ಕರಕುಶಲ ವಸ್ತುಗಳು, ಸ್ಮರಣಿಕೆಗಳು, ವಸ್ತ್ರಗಳು ಹೀಗೆ ಎಲ್ಲಾ ರೀತಿಯ ವಸ್ತುಗಳೂ ಇಲ್ಲಿ ಸಿಗುತ್ತವೆ. ಅಗ್ಗದ ದರದಲ್ಲಿ ಇವು ಕೈಗೆಟುಕುವ ಕಾರಣ ಖರೀದಿಸಲು ಹೆಚ್ಚು ಯೋಚಿಸಬೇಕಾಗಿಲ್ಲ. ಕುದುರೆಯ ಬೆನ್ನ ಮೇಲೆ ಕುಳಿತು ಹಿಮಾಲಯ ಪರ್ವತ ಏರುವಾಗ ಜೀವ ಬಾಯಿಗೆ ಬಂದಂತಹ ಅನುಭವ, ಮೇಲೆ ಹೋಗುತ್ತಿದ್ದಂತೆ ಆಮ್ಲಜನಕದ ಪ್ರಮಾಣ  ಕಡಿಮೆಯಾಗುತ್ತಾ ಹೋಗುತ್ತದೆ, ಅದರಿಂದ ಸ್ವಲ್ಪ ಮಟ್ಟಿಗೆ ಉಸಿರಾಡಲು ಕಷ್ಟವಾಗುತ್ತದೆ.

ಆದರೆ ಧೈರ್ಯಗೆಡದೆ ಪರ್ವತ ಏರಿ ಹಿಮದ ರಾಶಿಯ ಕಂಡಾಗ, ಅದರಲ್ಲಿ ಆಟವಾಡಿದಾಗ… ವಾವ್! ಸ್ವರ್ಗವೇ ಕೈಗೆ ಸಿಕ್ಕಂತೆ. ಇನ್ನೇಕೆ ತಡ, ನೀವು ಒಮ್ಮೆ ಮನಾಲಿಗೆ ಭೇಟಿ ನೀಡಿ, ಆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ.

Exit mobile version