ಮರಾಠ ಪ್ರಾಧಿಕಾರ ರಚನೆ ತೀರ್ಮಾನವೇ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರೇರಣೆ: ಡಿಕೆಶಿ

ಬೆಂಗಳೂರು, ಜ. 20: ರಾಜ್ಯದ ಗಡಿ ವಿಚಾರ ಮುಗಿದ ಅಧ್ಯಾಯ. ಎಲ್ಲವೂ ಸರಿಯಾಗಿ ಇತ್ಯರ್ಥವಾಗಿದೆ. ಆದರೆ ಠಾಕ್ರೆ ಅವರ ಹೇಳಿಕೆ ರಾಜಕೀಯ ಪ್ರೇರಿತ. ರಾಜ್ಯ ಸರ್ಕಾರ ಅನಗತ್ಯವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀರ್ಮಾನಿಸಿದ್ದೆ ಠಾಕ್ರೆ ಹೇಳಿಕೆಗೆ ಪ್ರೇರಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಗಳ ವಿಂಗಡನೆ ವೇಳೆ ತೆಗೆದುಕೊಂಡ ಗಡಿ ತೀರ್ಮಾನ ಈಗ ಮುಗಿದ ಅಧ್ಯಾಯ. ಕರ್ನಾಟಕ ಭೂಪಟ ಸ್ಪಷ್ಟವಾಗಿದ್ದು, ನಮ್ಮ ಊರು, ಗ್ರಾಮಗಳೆಲ್ಲ ವಿಂಗಡಣೆ ಆಗಿವೆ. ನಾವು ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನಮ್ಮಿಂದ ಒಂದಿಂಚೂ ಅವರಿಗೆ ಹೋಗುವುದಿಲ್ಲ, ಅವರಿಂದಲೂ ಒಂದಿಂಚೂ ನಮಗೆ ಬರುವುದಿಲ್ಲ.

ಗಡಿ ವಿಚಾರದಲ್ಲಿ ಮಹಾಜನ್ ವರದಿ ಇದೆ. ಎಲ್ಲ ಭಾಗದ ಗಡಿ ನಿಗದಿಯಾಗಿದೆ. ಗೊಂದಲ ಸೃಷ್ಟಿಸಲು, ರಾಜಕೀಯ ಉದ್ದೇಶದಿಂದ ಠಾಕ್ರೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ನಿರ್ಧಾರ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪ್ರೇರಣೆಯಾಗಿದೆ.

ರಾಜ್ಯದಲ್ಲಿನ ಮರಾಠಿಗರ ಅಭಿವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಮರಾಠ ಪ್ರಾಧಿಕಾರ ಅನಗತ್ಯವಾಗಿತ್ತು. ಇದರಿಂದ ಈ ವಿವಾದ ಎದ್ದಿದೆ. ಈ ಸರ್ಕಾರ ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತಿ, ಆ ಭಾಗದ ಜನರಲ್ಲಿ ಗೊಂದಲ ಸೃಷ್ಟಿಸಿದೆ. ವಿಭಿನ್ನ ಅಭಿಪ್ರಾಯ ಮೂಡುವಂತೆ ಬೀಜ ಬಿತ್ತಿರುವುದೇ ರಾಜ್ಯ ಬಿಜೆಪಿ ಸರ್ಕಾರ. ರಾಜ್ಯದಲ್ಲಿರುವ ಮರಾಠ ಭಾಷಿಗರು ನಮ್ಮವರೇ. ಹೀಗಾಗಿ ಎಲ್ಲರೂ ಶಾಂತಿಯುತವಾಗಿ ಸೌಹಾರ್ದತೆಯಿಂದ ಇರಬೇಕು ಎಂದರು.

ಇದೇ ವೇಳೆ ಸಚಿವ ಯೋಗೇಶ್ವರ್ ವಿರುದ್ಧ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಅವರು ಮಾಹಿತಿ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ನನಗೂ ಕೆಲವು ವಿಚಾರಗಳು ಗೊತ್ತಿವೆ. ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದರು.

Exit mobile version