ಕೊರೊನಾದಿಂದ ಸತ್ತವರ ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳಲಿ: ಸಿದ್ದರಾಮಯ್ಯ

ಬೆಂಗಳೂರು, ಜೂ. 30: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಈಗಲಾದರೂ ಮಾನವೀಯತೆಯಿಂದ ನಡೆದುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿರುವ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾದಿಂದ ಮೃತರಾದ ವ್ಯಕ್ತಿಗಳ ಕುಟುಂಬಕ್ಕೆ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯ ನಿಯಮದಂತೆ ಪರಿಹಾರ ನೀಡಬೇಕೆಂಬ ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದರೂ‌ ಸುಪ್ರೀಮ್ ಕೋರ್ಟ್ ಪುರಸ್ಕರಿಸಿದೆ.
ಈಗಲಾದರೂ ಕೇಂದ್ರ ಮತ್ತು ರಾಜ್ಯ‌ ಸರ್ಕಾರ ಈ ಕುರಿತು ಮಾನವೀಯತೆಯಿಂದ ನಡೆದುಕೊಳ್ಳಲಿ.

ಒಂದು‌ ಕುಟುಂಬದಲ್ಲಿ ಕೊರೊನಾದಿಂದ ಸಾವಿಗೀಡಾದ ಒಬ್ಬ ವ್ಯಕ್ತಿಗೆ ಮಾತ್ರ ಒಂದು‌ ಲಕ್ಷ ರೂಪಾಯಿ ಪರಿಹಾರ ನೀಡುವ ಬಿಜೆಪಿ ಸರ್ಕಾರದ ನಿರ್ಧಾರ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ನಮ್ಮ ವಾದಕ್ಕೆ ಸುಪ್ರೀಮ್ ಕೋರ್ಟ್‌ ಸಹಮತ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.

ಕೊರೊನಾದಿಂದ ಮೃತಪಟ್ಟವರಿಗೆ ‌ಪರಿಹಾರ ನೀಡಲು
ಆರು ವಾರಗಳೊಳಗೆ ಮಾರ್ಗದರ್ಶಿ ಸೂತ್ರವನ್ನು ಸಿದ್ದ ಪಡಿಸಬೇಕೆಂದು ಸುಪ್ರೀಮ್ ಕೋರ್ಟ್ ನೀಡಿರುವ ಆದೇಶವನ್ನು ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ ಗಂಭೀರವಾಗಿ ಪರಿಗಣಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕೊರೊನಾದಿಂದ‌ ಮೃತ ಪಟ್ಟವರಿಗೆ ಪರಿಹಾರ ಸಿಗಬೇಕಾದರೆ‌ ಸಾವಿನ‌‌ ನಿಖರವಾದ ಸಂಖ್ಯೆ‌ ಲಭ್ಯ ಇರಬೇಕಾಗುತ್ತದೆ. ಇದಕ್ಕಾಗಿ‌ ಕೊರೊನಾ ಸಾವಿನ ಮರು ಸಮೀಕ್ಷೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Exit mobile version