ಮಿಷನ್-2022 ಯೋಜನೆಯ ಪರಿಕಲ್ಪನೆ ತೆರೆದಿಟ್ಟ ಸಿಎಂ

ಬೆಂಗಳೂರು, ಡಿ. 17:  2022ರ ವೇಳೆಗೆ ರಾಜದಾನಿ ಬೆಂಗಳೂರನ್ನು ಸಮಗ್ರ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದೇ ಬೆಂಗಳೂರು ಮಿಷನ್ 2022 ಯೋಜನೆಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಬೆಂಗಳೂರು ಮಿಷನ್ 2022 ಯೋಜನೆಯ ಪರಿಕಲ್ಪನೆಯನ್ನು ತೆರೆದಿಟ್ಟರು. ಕಳೆದ ಎರಡು ವರ್ಷಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ 12 ಅತಿ ದಟ್ಟಣೆಯ 190 ಕಿ.ಮೀ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ವಾರ್ಷಿಕ ನಿರ್ವಹಣಾ ಒಪ್ಪಂದದ ಮೂಲಕ ಸುಮಾರು 400 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳ ನಿರ್ವಹಣೆ ಮಾಡಲಾಗುತ್ತಿದೆ. ಸ್ಮಾರ್ಟ್ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ಸಮೂಹ ಸಾರಿಗೆ ವ್ಯವಸ್ಥೆ, ಮೆಟ್ರೋ ಕಾಮಗಾರಿ ಆದ್ಯತಾ ಪಥ, ಉಪನಗರ ರೈಲ್ವೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಸಿಲಿಕಾನ್ ಸಿಟಿ ಎದುರಿಸುತ್ತಿರುವ ಕಸದ ಸಮಸ್ಯೆ ನಿವಾರಣೆಗಾಗಿ ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಉದ್ದೇಶದಿಂದ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸುವುದು, ʼನನ್ನ ಕಸ ನನ್ನ ಜವಾಬ್ದಾರಿʼ ಘೋಷಣೆಯಡಿ ತ್ಯಾಜ್ಯ ನಿರ್ವಹಣೆಗೆ ನಾಗರಿಕ ಸಹಭಾಗಿತ್ವ, ಶುಚಿ ಮಿತ್ರ ತರಬೇತಿ ಕಾರ್ಯಕ್ರಮ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

Exit mobile version