ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ(Financial Crisis) ಬಳಲುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾಗೆ(Srilanka) ತಮಿಳುನಾಡು(Tamilnadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್(MK Stalin) ಸುಮಾರು 200 ಕೋಟಿ ರೂ. ಮೌಲ್ಯದ ಸಹಾಯಹಸ್ತ ನೀಡಿದ್ದು, ಶ್ರೀಲಂಕಾ ಪ್ರಧಾನಿ(Primeminister) ರಾನಿಲ್ ವಿಕ್ರಮಸಿಂಘೆ(Ranil Vikramsinghai) ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, “ತಮಿಳುನಾಡು ಸರ್ಕಾರ ಕಳುಹಿಸಿದ ಅಕ್ಕಿ, ಹಾಲಿನ ಪುಡಿ, ವೈದ್ಯಕೀಯ ಉಪಕರಣಗಳು ಸೇರಿದಂತೆ ಅನೇಕ ಉಪಯುಕ್ತ ವಸ್ತುಗಳನ್ನು ಶ್ರೀಲಂಕಾ ಸ್ವೀಕರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ನಮ್ಮನ್ನು ಬೆಂಬಲಿಸಿದ ಎಲ್ಲ ಭಾರತೀಯರಿಗೂ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ” ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಮತ್ತು ಭಾರತೀಯ ಮೂಲದ ಶ್ರೀಲಂಕಾ ತಮಿಳರನ್ನು ಪ್ರತಿನಿಧಿಸುವ ಸಿಲೋನ್ ವರ್ಕಸ್ ಕಾಂಗ್ರೆಸ್ ನಾಯಕ ಸೆಂಥಿಲ್ ತೊಂಡಮನ್ ಅವರ ಸಹಾಯಕ್ಕೂ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಧನ್ಯವಾದ ತಿಳಿಸಿದ್ದಾರೆ. ಇನ್ನು ತಮಿಳುನಾಡು ಸರ್ಕಾರ ಒಟ್ಟು 40000 ಸಾವಿರ ಮೆಟ್ರಿಕ್ ಟನ್ ಅಕ್ಕಿ, 500 ಮೆಟ್ರಿಕ್ ಟನ್ ಹಾಲಿನ ಪುಡಿ ಮತ್ತು ವೈದ್ಯಕೀಯ ವಸ್ತುಗಳನ್ನು ನೀಡುವುದಾಗಿ ಶ್ರೀಲಂಕಾಗೆ ಭರವಸೆ ನೀಡಿದೆ.

ಸದ್ಯ 9000 ಮೆಟ್ರಿಕ್ ಟನ್ ಅಕ್ಕಿ, 50 ಮೆಟ್ರಿಕ್ ಟನ್ ಹಾಲಿನ ಪುಡಿ ಮತ್ತು ಕೆಲ ವೈದ್ಯಕೀಯ ವಸ್ತುಗಳನ್ನು ಕಳುಹಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವನ್ನು ನೀಡುವ ಬಗ್ಗೆಯೂ ತಮಿಳುನಾಡು ಸರ್ಕಾರ ಶ್ರೀಲಂಕಾಗೆ ಅಭಯ ನೀಡಿದೆ. ಇನ್ನು ಭಾರತ ಸರ್ಕಾರ ಈಗಾಗಲೇ 5000 ಕೋಟಿ ರೂ. ಮೌಲ್ಯದ ನೆರವನ್ನು ಶ್ರೀಲಂಕಾಗೆ ನೀಡಿದೆ.