ಮೋದಿಯದು ದೇಶವನ್ನೇ ಮಾರುವ ಕೆಲಸ: ಎಂ. ಲಕ್ಷ್ಮಣ್

ಮೈಸೂರು, ಡಿ. 17: ” ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದ ಮೇಲೆ ಇಡೀ ದೇಶವನ್ನೇ ಮಾರುವ ಕೆಲಸವಾಗುತ್ತಿದೆ. 34 ಪ್ರಮುಖ ಸಾರ್ವಜನಿಕ ವಲಯಗಳನ್ನು ಇಲ್ಲಿಯವರೆಗೆ ಖಾಸಗೀಕರಣ ಮಾಡಲಾಗಿದೆ” ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಆರೋಪಿಸಿದರು.

ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ರೈಲ್ವೆ ಖಾಸಗೀಕರಣದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ರೈಲ್ವೆ ಇಲಾಖೆಯನ್ನು ಶೇಕಡಾ 60ರಷ್ಟು ಈಗಾಗಲೇ ಖಾಸಗೀಕರಣ ಮಾಡಲಾಗಿದೆ” ಎಂದು ಹೇಳಿದರು.

“ಈಗಾಗಲೇ ದೇಶದಲ್ಲಿ 70 ರೈಲ್ವೆ ನಿಲ್ದಾಣಗಳನ್ನು 3 ವರ್ಷಗಳಿಂದ ಖಾಸಗಿಯವರಿಗೆ ವಹಿಸಲಾಗಿದೆ. 2017ರಲ್ಲಿ ದೇಶಾದ್ಯಂತ 151 ರೈಲುಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಹಂತ-ಹಂತವಾಗಿ ಇಡೀ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ರೈಲ್ವೆ ಇಲಾಖೆಯನ್ನು ಅದಾನಿ ಗ್ರೂಪ್‌ಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗಿದೆಯಾ? ಎನ್ನುವ ಅನುಮಾನವಿದೆ. ಈಗಾಗಲೇ ರೈಲಿನ ಇಂಜಿನ್‌ಗಳಿಗೆಲ್ಲಾ ಅದಾನಿ ಕಂಪನಿ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತಿದೆ” ಎಂದು ಲಕ್ಷ್ಮಣ್ ತಿಳಿಸಿದರು.

“ಮುಂದೊಂದು ದಿನ ಜನಸಾಮಾನ್ಯರು ರೈಲಿನ ಶೌಚಾಲಯವನ್ನು ಬಳಸಲೂ ಸಹ ಹಣ ನೀಡಬೇಕಾಗುವ ಪರಿಸ್ಥಿತಿ ಬರಲಿದೆ. ರೈಲ್ವೆ ಖಾಸಗೀಕರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.

ಗೋಮಾಂಸದ ರಫ್ತು: “ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ನಮ್ಮ ದೇಶದ ದನದ ಮಾಂಸದ ರಫ್ತು ಸುಮಾರು ಶೇ.25 ರಷ್ಟು ಹೆಚ್ಚಾಗಿದೆ. ಇಡೀ ಪ್ರಪಂಚದಲ್ಲೇ ಬೀಫ್ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ” ಎಂದು ಲಕ್ಷ್ಮಣ್ ಅವರು ದೂರಿದರು.

“ದೇಶದಿಂದ ದಿನನಿತ್ಯ ಸುಮಾರು 20 ಲಕ್ಷ ಟನ್‌ನಷ್ಟು ದನದ ಮಾಂಸ ರಫ್ತಾಗುತ್ತಿದೆ. ದೇಶದ ಪ್ರಮುಖ ದನದ ಮಾಂಸದ ರಫ್ತು ಕಂಪನಿಗಳ ಮಾಲೀಕರು ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯವರಿಗೆ ಗಾಂಧಿ ತತ್ವದಲ್ಲಿ ನಂಬಿಕೆ ಇದ್ದರೆ ಕೂಡಲೇ ಎಲ್ಲಾ ರಫ್ತು ಕಂಪನಿಗಳನ್ನು ಮುಚ್ಚಿಸಲಿ” ಎಂದು ಆಗ್ರಹಿಸಿದರು.

Exit mobile version