ಕೋತಿಗಳ ಮಾರಣಹೋಮ ಪ್ರಕರಣ: ದಂಪತಿ ಸೇರಿದಂತೆ ಐವರನ್ನು ಬಂಧಿಸಿದ ಹಾಸನ ಪೊಲೀಸರು

ಹಾಸನ, ಅ. 02: ರಾಜ್ಯವನ್ನೇ ತಲ್ಲಣಗೊಳಿಸಿದ್ದ ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು, ಕೋತಿಗಳನ್ನು ಸೆರೆಹಿಡಿದಿದ್ದ ದಂಪತಿಗಳಾದ ರಾಮು, ಯಶೋಧ ಸೇರಿದಂತೆ ಈ ಹೀನ ಕೃತ್ಯಕ್ಕೆ ಸಾಥ್ ನೀಡಿದ ವಾಹನ ಚಾಲಕ ಮಂಜು, ಉಗರೆ ಗ್ರಾಮದ ಪ್ರಸನ್ನ ಹಾಗೂ ಜಮೀನು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣವನ್ನು ಭೇದಿಸುವಲ್ಲಿ ಸಫಲರಾದ ಪೊಲೀಸರು, ಮಂಗಗಳನ್ನು ಸೆರೆ ಹಿಡಿದಿದ್ದ ರಾಮು-ಯಶೋಧ ಅವರನ್ನು ಬಂಧಿಸಿ ಸತ್ಯ ಬಾಯ್ಬಿಡಿಸಿದ್ದು, ಇವರು ನೀಡಿದ ಮಾಹಿತಿ ಅನ್ವಯ ಉಗನೆ ಗ್ರಾಮದ ಜಮೀನು ಮಾಲೀಕ, ಬಾಣಾವರದ ಕೋತಿ ಸೆರೆ ತಂಡಕ್ಕೆ ಕೋತಿ ಹಿಡಿಯುವಂತೆ ಗುತ್ತಿಗೆ ನೀಡಿದ್ದ. ಅದರಂತೆ ದಂಪತಿ ಒಂದು ವಾರ ಕೋತಿಗಳಿಗೆ ಬ್ರೆಡ್, ಬಿಸ್ಕೆಟ್ ಹಾಕಿ ಪಳಗಿಸಿದರು. ಕೊನೆಗೆ ಜು.28ರಂದು ಕೋತಿಗಳನ್ನು ಸೆರೆ ಹಿಡಿದಿದ್ದರು. ಅವುಗಳನ್ನು ಗೋಣಿ ಚೀಲಗಳಲ್ಲಿ ಹಾಕಿ ವಾಹನದಲ್ಲಿ ಸಾಗಿಸುತ್ತಿದ್ದಾಗ, ಉಸಿರುಗಟ್ಟಿ ಮೃತಪಟ್ಟಿವೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ.

ಬಳಿಕ ಮೃತಪಟ್ಟಿದ್ದ ಎಲ್ಲಾ ಕೋತಿಗಳನ್ನು ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಎಂಬಲ್ಲಿ ಬಿಸಾಡಿ ಹೋಗಿದರು.‌ ಕೋತಿಗಳ ಮಾರಣಹೋಮದ ಈ ಕೃತ್ಯ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

Exit mobile version