ಮುಂದಿನ ವಾರ ಕರ್ನಾಟಕಕ್ಕೆ ಮುಂಗಾರು ಎಂಟ್ರಿ; ಈ ಬಗ್ಗೆ ಸಿಎಂ ಬಿ. ಎಸ್‌ ಯಡಿಯೂರಪ್ಪ ನೇತೃತ್ವದ ಮುಂಗಾರು ಮುಂಜಾಗ್ರತಾ ಸಭೆ

ಬೆಂಗಳೂರು, ಜೂ. 3: ಕೇರಳಕ್ಕೆ ಇಂದು ಮುಂಗಾರು ಪ್ರವೇಶವಾಗಲಿದ್ದು, ಜೂನ್ 6 ಅಥವಾ 7ರಂದು ಕರ್ನಾಟಕದಲ್ಲಿ ಮುಂಗಾರು ಮಳೆಯ ಎಂಟ್ರಿಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಳೆ ಮುಂಜಾಗ್ರತಾ ಕ್ರಮದ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿದ್ದಾರೆ. ಸಚಿವರು, ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸಿದ್ದು, ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಈಗಾಗಲೇ ಲಾಕ್​ಡೌನ್​ನಿಂದ ಬೆಂಗಳೂರಿನಲ್ಲಿ ಕೊರೋನಾ ಕೊಂಚ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಯಿದೆ. ಮಳೆಗಾಲದಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಬರುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗಗಳೂ ಹೆಚ್ಚುತ್ತವೆ. ಅಲ್ಲದೆ ಮಳೆಗಾಲದಿಂದ ಮನೆ ಗಳಿಗೆ ನುಗ್ಗುವ ನೀರು, ಪ್ರವಾಹ ಸಂಭವವಿದೆ. ಹೀಗಾಗಿ ಕಟ್ಟು ನಿಟ್ಟಿನ ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಚರ್ಚಿಸಿದ್ದಾರೆ.

ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಗುಡುಗು ಸಿಡಿಲು ಸಹಿತ ಮಳೆಯಾಗುವುದರಿಂದ ಒಟ್ಟು 17 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ. ಜೂನ್ 6ರವರೆಗೆ ಕರ್ನಾಟಕದಲ್ಲಿ ಮಳೆ ಮುಂದುವರೆಯಲಿದೆ. ಇಂದು ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಹೀಗಾಗಿ, ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರ್ನಾಟಕಕ್ಕೆ ಜೂನ್ 6 ಅಥವಾ 7ರಂದು ಮುಂಗಾರು ಆಗಮನವಾಗುವ ನಿರೀಕ್ಷೆಯಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಜಾಸ್ತಿಯಾದ ಹಿನ್ನೆಲೆ ಮಳೆಯಾಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಇನ್ನು ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್?: ಕರ್ನಾಟಕದ ಉತ್ತರ ಕನ್ನಡ , ದಕ್ಷಿಣ ಕನ್ನಡ , ಉಡುಪಿ, ಬೀದರ್, ಗದಗ , ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಕೋಲಾರ, ತುಮಕೂರು, ಹಾಸನ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಳದಿ ಅಲರ್ಟ್​ ಘೋಷಿಸಲಾಗಿದೆ. ಕರ್ನಾಟಕಕ್ಕೆ ಜೂನ್ 6 ಅಥವಾ 7ರಂದು ಮುಂಗಾರಿನ ಪ್ರವೇಶವಾಗಲಿದೆ. ಇಂದಿನಿಂದ ಜೂನ್ 5ರವರೆಗೆ ಕೇರಳ ಮತ್ತು ಮಾಹೆ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ.

ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗಲಿದೆ. ಈಗಾಗಲೇ ಕೇರಳ, ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಇಂದು ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತದಲ್ಲಿ ಜೂನ್​ನಿಂದ ಸೆಪ್ಟೆಂಬರ್​ವರೆಗೆ ವರ್ಷದ ಶೇ. 70ಕ್ಕೂ ಹೆಚ್ಚು ಪ್ರಮಾಣದ ಮಳೆಯಾಗಲಿದೆ. ಈ ವರ್ಷ ದೇಶದಲ್ಲಿ ಸಾಧಾರಣ ಮಳೆ ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಂದಿನಿಂದ ಮಳೆ ತೀವ್ರಗೊಳ್ಳುವುದರಿಂದ ಒಂದು ವಾರಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಕೇರಳ ಮತ್ತು ಕರ್ನಾಟಕದ ಕರಾವಳಿ ತೀರದಲ್ಲಿ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

Exit mobile version