ಹನಿ ನೀರಿಗಾಗಿ 30 ಅಡಿ ಆಳದ ಬಾವಿಗೆ ಇಳಿದು ನೀರು ಹೊತ್ತ ಮಹಿಳೆ!

ಭಾರತದ ಅನೇಕ ಭಾಗಗಳಲ್ಲಿ ನೀರಿಗೆ ಬಹಳಷ್ಟು ಬರ ಬಂದಿದೆ. ಇನ್ನೂ ಬೇಸಿಗೆ ಕಾಲದಲ್ಲಂತೂ ಎಷ್ಟೇ ನೀರನ್ನು ಸಂಗ್ರಹಿಸಿಕೊಂಡರೂ ಅದು ಸಾಲುವುದಿಲ್ಲ.

ಮಧ್ಯಪ್ರದೇಶದಲ್ಲಿ(MadhyaPardesh) ಬಿಸಿಲಿನ ಶಾಖವೂ ಹೆಚ್ಚಿರುವುದರಿಂದ ಅಲ್ಲಿನ ಜನರಿಗೂ ಸಹ ಕುಡಿಯಲು ನೀರು ದೊರಕುತ್ತಿಲ್ಲ. ಸದ್ಯ ಇದೇ ರೀತಿ ಕುಡಿಯುವ ನೀರಿಗೆ ಹಾಹಾಕಾರ ಹುಟ್ಟಿಕೊಂಡಿದ್ದು, ಮಧ್ಯಪ್ರದೇಶದ ಡಿಂಡೋರಿಯಲ್ಲಿ(Dindori) ಗ್ರಾಮದ ಮಹಿಳೆ ತಮ್ಮ ಕುಟುಂಬಗಳಿಗೆ ನೀರು ತರಲು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. 30 ಅಡಿ ಆಳದ ಬಾವಿಯ ಒಳಗಡೆ ಹೋಗಿ ಮಹಿಳೆ ನೀರನ್ನು ಸಂಗ್ರಹಿಸಿ ತಮ್ಮ ಕುಟುಂಬಸ್ಥರ ನೀರಿನ ದಾಹವನ್ನು ನೀಗಿಸಿದ್ದಾರೆ. ಬರೀ ಇವರಷ್ಟೇ ಅಲ್ಲದೆ ಇಲ್ಲಿನ ಪ್ರತಿ ಗ್ರಾಮಸ್ಥರು ಹನಿ ನೀರಿಗಾಗಿ ಪರದಾಡುವಂತಾಗಿದೆ.

ಹಗಲು ರಾತ್ರಿ ಎಂದೂ ಸಹ ನೋಡದೆ ನೀರನ್ನು ಸಂಗ್ರಹಿಸುವ ಪರಿಸ್ಥಿತಿ ಇಲ್ಲಿನ ಜನಕ್ಕೆ ಎದುರಾಗಿದೆ. ಕುಡಿಯುವ ನೀರನ್ನು ಸಂಗ್ರಹಿಸಲು ಮಹಿಳೆಯರು ಹಾಗೂ ಹುಡುಗಿಯರೇ ಮೂವತ್ತು ಅಡಿ ಬಾವಿಯ ಒಳಗೆ ಇಳಿಯುತ್ತಿದ್ದಾರೆ. ಒಂದು ಲೋಟ ನೀರು ಸಹ ಸಿಗದ ಕಾರಣ ರಾತ್ರಿ ವೇಳೆಯಲ್ಲಿಯೂ ಸಹ ಬಾವಿ ಒಳಗೆ ಇಳಿದು ನೀರನ್ನು ತರುವ ಪರಿಸ್ಥಿತಿ ಈ ಜನರದ್ದಾಗಿದೆ. ಈ ಊರಿನ ಜನರು ಹೇಳುವುದೇನೆಂದರೆ ರಾಜಕಾರಣಿಗಳು ಕೇವಲ ಚುನಾವಣೆಯ ಸಮಯದಲ್ಲಿ ಅಷ್ಟೇ ಮತವನ್ನು ಕೇಳಲು ಬರುತ್ತಾರೆ.

ಆದರೆ ಗ್ರಾಮಸ್ಥರ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ, ಅದಕ್ಕಾಗಿಯೇ ಅವರ ಸಮಸ್ಯೆಗಳು ಪೂರ್ತಿಯಾಗಿ ಪರಿಹಾರವಾಗುವವರೆಗೂ ಯಾರೊಬ್ಬರೂ ಮತ ಚಲಾಯಿಸುವುದಿಲ್ಲ, ನಮಗೆ ಇಂಥ ಪರಿಸ್ಥಿತಿ ತಂದವರಿಗೆ ನಾವು ಯಾವುದೇ ಕಾರಣಕ್ಕೂ ಮತ ಹಾಕುವುದಿಲ್ಲ ಎಂದು ಸಂಬಂಧಪಟ್ಟ ರಾಜಕಾರಣಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Exit mobile version