ಮೈ. ವಿವಿ ಘಟಿಕೋತ್ಸವ: ವಿದೇಶಿ ‘ಗೌನ್’ ಬದಲು ದೇಸಿ ಉಡುಪು ಬಳಕೆಗೆ ಚಿಂತನೆ

ಮೈಸೂರು, ಡಿ. 31: ಶತಮಾನದ ‌ಇತಿಹಾಸವಿರುವ ಪ್ರತಿಷ್ಠಿತ ಮೈಸೂರು ವಿವಿ ಸೇರಿದಂತೆ ‌ಹಲವು‌ ವಿಶ್ವವಿದ್ಯಾಲಯಗಳಲ್ಲಿ ದಶಕಗಳಿಂದ ಚಾಲ್ತಿಯಲ್ಲಿರುವ ‘ಗೌನ್’(ಘಟಿಕೋತ್ಸವ ಉಡುಪು) ಬದಲಾವಣೆಗೆ ಮೈಸೂರು ವಿವಿ ಚಿಂತನೆ ನಡೆಸಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಪರೀಕ್ಷಾಂಗ ಕುಲಸಚಿವರ ನೇತೃತ್ವದಲ್ಲಿ ಸಿಂಡಿಕೇಟ್ ಉಪ ಸಮಿತಿ ರಚಿಸಲಾಗಿದೆ. ಈ ಸಂಬಂಧ ಬೇರೆ ವಿ.ವಿ.ಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ‘ಗೌನ್’ ಬದಲಾವಣೆ ಸಂಬಂಧ ಸ್ಟ್ಯಾಚೂಟ್ ಮಾರ್ಪಾಡಿಗೆ ಪೂರಕವಾಗುವಂತೆ ಅಧ್ಯಯನ ವರದಿ ನೀಡಲು ಕೋರಿದೆ.

ಸಿಂಡಿಕೇಟ್‌ನ 8ನೇ ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ಮೈಸೂರು ವಿವಿ ಘಟಿಕೋತ್ಸವದ ಪ್ರಚಲಿತ ಉಡುಪನ್ನು (ಗೌನ್) ಬದಲಾಯಿಸಬೇಕೆಂದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಅವರು ಮನವಿ ಮಾಡಿದ್ದರು.

ಮೈಸೂರು ವಿವಿ ತನ್ನ 100ನೇ ಘಟಿಕೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಮತ್ತು ದೇಶಕ್ಕೆ ಸ್ವತಂತ್ರ ಬಂದು 73 ವರ್ಷಗಳ ನಂತರವೂ ಘಟಿಕೋತ್ಸವದ ಸಂದರ್ಭದಲ್ಲಿ ಕುಲಾಧಿಪತಿಗಳು, ಕುಲಪತಿಗಳು, ಕುಲಸಚಿವರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಇನ್ನಿತರ ಗಣ್ಯರು ಸಾಂಪ್ರದಾಯಿಕ ಯುರೋಪಿಯನ್ (ಬ್ರಿಟೀಷ್) ಕಪ್ಪು ನಿಲುವಂಗಿ (ಗೌನ್) ಅನ್ನು ಈಗಲೂ ಧರಿಸುತ್ತಿರುವುದು ಪಾಶ್ಚಾತ್ಯರ ಅಂಧಾನುಕರಣೆ, ವಸಾಹತುಶಾಹಿ ಹಾಗೂ ದಾಸ್ಯದ ಮನೋಭಾವನೆಯ ಪ್ರತೀಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಕೈಮಗ್ಗ ಬಟ್ಟೆಗಳಿಂದ ಮಾಡಿದ ಸ್ಥಳೀಯ ಪರಿಸರಕ್ಕೆ, ವಾತಾವರಣಕ್ಕೆ (ಹವಾಗುಣ) ಹೊಂದುವಂತಹ, ಸ್ವದೇಶಿ ಆಧಾರಿತ ಹಾಗೂ ಭಾರತೀಯ ಸಂಸ್ಕೃತಿ ಪರಂಪರೆ ಬಿಂಬಿಸುವಂತಹ ಸಾಂಪ್ರದಾಯಿಕ ಉಡುಪನ್ನು ಘಟಿಕೋತ್ಸವದಲ್ಲಿ ಧರಿಸಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಪರೀಕ್ಷಾಂಗ ಕುಲಸಚಿವ ನೇತೃತ್ವದಲ್ಲಿ ಸಿಂಡಿಕೇಟ್ ಉಪ ಸಮಿತಿ ರಚಿಸಲಾಗಿದೆ.

Exit mobile version