ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಲು ಮೈಸೂರು ವಿವಿ ನಿರ್ಧಾರ

ಮೈಸೂರು, ಮೇ. 28: ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿವಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರಿಸಲು ಕಷ್ಟಸಾಧ್ಯವಾಗಿದೆ. ಈ ಜಾಗತಿಕ ಸಂಕಷ್ಟದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಈ ರೀತಿ ತಂದೆ ತಾಯಂದಿರನ್ನು ಅಥವಾ ಕುಟುಂಬದ ಜವಾಬ್ದಾರಿ ವಹಿಸಿಕೊಂಡ ಮುಖ್ಯಸ್ಥರನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರೆಸಲು ಸಾಧ್ಯವಾಗದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅವರ ಬದುಕಿನ ಭವಿಷ್ಯವನ್ನು ರೂಪಿಸಲು ಪ್ರಸ್ತಾವನೆಯನ್ನು ತಯಾರಿಸಿದೆ.

ಈ ಹಿನ್ನೆಲೆಯಲ್ಲಿ ಕೋವಿಡ್-19 ವೈರಾಣುವಿನಿಂದ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ನಿಧನ ಹೊಂದಿದ ಪೋಷಕರ ಮಕ್ಕಳಿಗೆ ಮೈಸೂರು ವಿವಿ ಘಟಕ ಕಾಲೇಜುಗಳಾದ ಮಹಾರಾಜ ಕಾಲೇಜು, ಯುವರಾಜ ಕಾಲೇಜು, ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಲಲಿತ ಕಲೆಗಳ ಕಾಲೇಜುಗಳಲ್ಲಿ ತಲಾ ಐದು ಸೀಟುಗಳನ್ನು ಹಾಗೂ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರಗಳಾದ ಮೈಸೂರಿನ ಮಾನಸಗಂಗೋತ್ರಿ, ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ಮತ್ತು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಗಳಲ್ಲಿ ತಲಾ ಮೂರು ಸೀಟುಗಳ ಪ್ರದೇಶಾತಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.

Exit mobile version