ನಕಲಿ ಕರೊನಾ ಲಸಿಕೆ- 194; ಇಂಟರ್ಪೋಲ್ ನೋಟಿಸ್

ನವದೆಹಲಿ, ಡಿ. 04: ವಿಶ್ವಾದ್ಯಂತ ಅನೇಕ  ಸಂಶೋಧಕರು  ಕಿಲ್ಲರ್ ಕರೊನಾ ಸೋಂಕನ್ನು ನಿರ್ಮೂಲನ ಮಾಡಲು ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅನೇಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ, ಆದರೆ ಇನ್ನೊಂದೆಡೆ ನಕಲಿ ಲಸಿಕೆ ಮಾರಾಟಗಾರರು  ಎಲ್ಲೆಡೆ ಹೆಚ್ಚುತ್ತಿದ್ದಾರೆ, ಎಂಬುದಾಗಿ ಇಂಟರ್​ ಪೋಲ್​ ಎಚ್ಚರಿಕೆ ನೀಡಿದೆ.

ಇಂಗ್ಲೆಂಡ್‌ ‘ಫೈಜರ್‌’ ಲಸಿಕೆಗೆ ಅನುಮತಿಸಿದ ಬೆನ್ನಲ್ಲೇ ಇಂಟರ್‌ಪೋಲ್‌ ಈ ಎಚ್ಚರಿಕೆ ನೀಡಿದೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಪೊಲೀಸ್‌ ಸಂಸ್ಥೆ ‘ಇಂಟರ್‌ಪೋಲ್‌’ ಈ ಕುರಿತು ಎಚ್ಚರಿಕೆಯ ಸಂದೇಶರವಾನಿಸಿದೆ. . ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿ 194 ಸದಸ್ಯ ರಾಷ್ಟ್ರಗಳಿಗೆ ಆರೆಂಜ್​ ನೋಟಿಸ್​ ಕೂಡ ನೀಡಿದೆ.

ಅಧಿಕೃತ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಜಾಹೀರಾತುಗಳ ಮೂಲಕ ಅಸಲಿ ಲಸಿಕೆಯನ್ನೇ ಹೋಲುವ ಲಸಿಕೆ ತಯಾರು ಮಾಡಿ ಜನರನ್ನು ಮರಳು ಮಾಡುವ ಹುನ್ನಾರ ನಡೆದಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಅಕ್ರಮ ಹಾಗೂ ನಕಲಿ ಲಸಿಕೆ ವ್ಯವಹಾರವನ್ನು ನಡೆಸುವ ಸಂಬಂಧ ಕೆಲವೊಂದು ಸಂಘಟಿತ ಕ್ರಿಮಿನಲ್‌ ನೆಟ್‌ವರ್ಕ್‌ಗಳು ಈಗಾಗಲೇ  ಪ್ರಾರಂಭವಾಗಿವೆ.

ಆನ್‌ಲೈನ್‌ ಮೂಲಕ ಇವು ಜನರನ್ನು ಹಾದಿತಪ್ಪಿಸುವ ಎಲ್ಲಾ ಸಾಧ್ಯತೆಗಳು ಇವೆ. ಆದ್ದರಿಂದ ಪ್ರತಿಯೊಂದು ವೆಬ್​ಸೈಟ್​ಗಳ ಮೇಲೆ ಕಣ್ಣು ಇಡುವುದು ಅತ್ಯವಶ್ಯಕವಾಗಿದೆ. ನಕಲಿ ಉತ್ಪನ್ನಗಳು ಮಾರಾಟವಾಗುತ್ತಿವೆ ಎಂದು ಕಂಡುಬಂದ ತಕ್ಷಣ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಕರೊನಾ ಲಸಿಕೆ ಎಂದು ತಿಳಿಯುವ ಜನರ ಪ್ರಾಣಕ್ಕೆ ಕುತ್ತಾಗಲಿವೆ ಈ ಲಸಿಕೆಗಳು ಎಂದು ಇಂಟರ್​ಪೋಲ್​ ತಿಳಿಸಿದೆ.

ಆನ್‌ಲೈನ್‌ ಲಸಿಕೆ ಮಾರಾಟ ಸಂಸ್ಥೆಗಳ ಜತೆ ಕೈಜೋಡಿಸಿ, ಜಾಗತಿಕವಾಗಿ ನಕಲಿ ಲಸಿಕೆ ಮಾರುತ್ತಿರುವ 3 ಸಾವಿರ ವೆಬ್‌ಸೈಟ್‌ಗಳ ಬಗ್ಗೆಯೂ ಇಂಟರ್‌ಪೋಲ್‌ ಎಚ್ಚರಿಸಿದೆ. ನಕಲಿ ಲಸಿಕೆ, ಕಳಪೆ ಮೆಡಿಕಲ್‌ ಡಿವೈಸ್‌ ಮಾರುವ ಈ ವೆಬ್‌ಸೈಟ್‌ಗಳಿಂದ ಗ್ರಾಹಕರಿಗೆ ಎದುರಾದ 1,700ಕ್ಕೂ ಅಧಿಕ ಸೈಬರ್‌ ಬೆದರಿಕೆಗಳನ್ನೂ ಸಂಸ್ಥೆ ಗಮನಿಸಿದೆ. ಈ ಸಂಬಂಧ ಇಂಟರ್‌ಪೋಲ್‌ ಜತೆಗೂಡಿ ಕಾರ್ಯನಿರ್ವಹಿಸುವ ಭಾರತದ ಸಿಬಿಐಗೂ ನೋಟಿಸ್​ ನೀಡಲಾಗಿದ್ದು, ಇಂಥ ಜಾಲದ ಮೇಲೆ ಕಣ್ಣಿಡಲು ಸೂಚನೆಯನ್ನು ನೀಡಲಾಗಿದೆ.

Exit mobile version