ರಾಜ್ಯಕ್ಕೆ ಲಸಿಕೆ ನೀಡದಿದ್ದರೂ ಜಾಹೀರಾತಿನಲ್ಲಿ ಮೋದಿ ಫೋಟೋ ಏಕೆ?: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು,ಜೂ.21: “ಜಾಹೀರಾತಿಗೆನೂ ಕೊರತೆ ಇಲ್ಲ, ಕೊರತೆ ಇರುವುದು ಲಸಿಕೆಗಳಿಗೆ ಮಾತ್ರ! ಇತ್ತ “ಉಚಿತ” ಲಸಿಕೆ ಎಂದು ಜಾಹೀರಾತು ಕೊಡುವುದು, ಅತ್ತ ಖಾಸಗಿ “ವ್ಯಾಪಾರ”ಕ್ಕೆ ಅನುವು ಮಾಡಿಕೊಡುವುದು, ಭಾರೀ ಚೆನ್ನಾಗಿದೆ ನಿಮ್ಮ ಪ್ರಚಾರದ ತಂತ್ರ ಎಂದು ರಾಜ್ಯ ಸರ್ಕಾರದ ನಿಲುವನ್ನು ಟೀಕಿಸಿದೆ.

ರಾಜ್ಯದಲ್ಲಿ ಇಂದಿನಿಂದ ಆರಂಭಿಸಿರುವ ಲಸಿಕೆ ಅಭಿಯಾನದ ಕುರಿತು ಎಲ್ಲಾ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಟೀಕಿಸಿರುವ ಕಾಂಗ್ರೆಸ್, ಮೋದಿ ಅವರು ರಾಜ್ಯಕ್ಕೆ ಲಸಿಕೆ ಕೊಡದಿದ್ದರೂ ಜಾಹೀರಾತು ಮಾತ್ರ ಕೊಡಲೇಬೇಕೆಂದು ತಾಕೀತು ಮಾಡಿದ್ದಾರೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಎಂದು ಪ್ರಶ್ನಿಸಿದೆ.

ಒಕ್ಕೂಟ ಸರ್ಕಾರ ರಾಜ್ಯಗಳಿಗೆ ನೀಡಿರುವ ಲಸಿಕೆ ಹಂಚಿಕೆಯ ಪಟ್ಟಿಯನ್ನು ಮುಚ್ಚಿಟ್ಟಿರುವುದೇಕೆ? ಅಧಿಕೃತವಾಗಿ ಪಟ್ಟಿ ಬಿಡುಗಡೆಗೊಳಿಸಿದರೆ ರಾಜ್ಯಗಳಿಗೆ ಮಾಡುತ್ತಿರುವ ತಾರತಮ್ಯ ಬಹಿರಂಗವಾಗುವ ಅಂಜಿಕೆಯೇ ಬಿಜೆಪಿಗೆ ಎಂದು ಪ್ರಶ್ನಿಸಿದೆ. ರಾಜ್ಯಕ್ಕಾದ ಲಸಿಕೆ ಅನ್ಯಾಯವನ್ನು ರಾಜ್ಯ ಸರ್ಕಾರ ಪ್ರಶ್ನಿಸುವುದನ್ನು ಬಿಟ್ಟು ಮೋದಿ ಭಜನೆಯಲ್ಲಿ ತೊಡಗಿರುವುದು ದುರಂತ ಎಂದು ಕಿಡಿಕಾರಿದೆ.

Exit mobile version