India: ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 242 ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ 2019ರಿಂದ ಯಾವುದೇ ಹೊಸ ಐಐಟಿ (IIT) ಅಥವಾ ಐಐಎಂ ಸ್ಥಾಪನೆ ಮಾಡಲಾಗಿಲ್ಲ. ಸದ್ಯ ಭಾರತದಲ್ಲಿ 23 ಐಐಟಿಗಳು ಮತ್ತು 20 ಐಐಎಂಗಳಿವೆ (IIM) ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ರಾಜ್ಯಸಭೆಗೆ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ 140 ಖಾಸಗಿ ವಿಶ್ವವಿದ್ಯಾಲಯಗಳು ಮತ್ತು 90 ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ ಎಂದು ಶಿಕ್ಷಣ ರಾಜ್ಯ ಸಚಿವ ಡಾ ಸುಬಾಸ್ ಸರ್ಕಾರ್ (Dr. Subhash Sarkar) ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಾಲ್ಕು ಡೀಮ್ಡ್ (Deemed) ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದ್ದು, ಎಂಟು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ. 2018-19ರಲ್ಲಿ ಒಟ್ಟು 60 ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದ್ದು, 2019-20ರಲ್ಲಿ ಈ ಸಂಖ್ಯೆ 34ಕ್ಕೆ ಏರಿದೆ. 2020-21ರಲ್ಲಿ 46 ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದ್ದು, 2021-22ರಲ್ಲಿ ಈ ಸಂಖ್ಯೆ 62 ಆಗಿತ್ತು. 2022-23ರಲ್ಲಿ 40 ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ.
2014ಕ್ಕೂ ಮೊದಲು ದೇಶದಲ್ಲಿ 13 ಐಐಎಂಗಳಿದ್ದವು. ಆದರೆ 2014 ರಿಂದ 2019ರ ನಡುವೆ ದೇಶದಲ್ಲಿ ಏಳು ಹೊಸ ಐಐಎಂಗಳನ್ನು (IIM) ಸ್ಥಾಪನೆ ಮಾಡಲಾಗಿದೆ. ಅದೇ ರೀತಿ 2014ಕ್ಕೂ ಮೊದಲು ದೇಶದಲ್ಲಿ ಕೇವಲ ಏಳು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗಳು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದವು. 2014 ರ ನಂತರ, ಎರಡು ಪಟ್ಟು ಹೆಚ್ಚು ಅಂದರೆ, 15 ಎಐಐಎಂಎಸ್ಗಳನ್ನು ದೇಶದಲ್ಲಿ ಸ್ಥಾಪಿಸಲಾಗಿದೆ.

ಇನ್ನು 2014ರ ನಂತರ 6 ವರ್ಷಗಳಲ್ಲಿ, ಪ್ರತಿ ವರ್ಷ ಹೊಸ ಐಐಟಿ (IIT) ಮಾಡಲಾಗಿದೆ. ಇವುಗಳಲ್ಲಿ ಒಂದನ್ನು ಕರ್ನಾಟಕದ ಧಾರವಾಡದಲ್ಲಿಯೂ ಸ್ಥಾಪನೆ ಮಾಡಲಾಗಿದೆ. 2014 ರ ಹೊತ್ತಿಗೆ ಭಾರತದಲ್ಲಿ 9 ಐಐಐಟಿಗಳು ಇದ್ದವು. ನಂತರದ 5 ವರ್ಷಗಳಲ್ಲಿ, 16 ಭಾರತೀಯ ಸಂಸ್ಥೆಗಳು ಮಾಹಿತಿ ತಂತ್ರಜ್ಞಾನ (ಐಐಐಟಿ) ಸ್ಥಾಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.