ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರಿ ಉದ್ಯೋಗ ಇಲ್ಲ, ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ: ಉತ್ತರಪ್ರದೇಶದಲ್ಲಿ ಹೊಸ ಕಾನೂನು

ಉತ್ತರಪ್ರದೇಶ, ಜು. 10: ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಗೆ ಸ್ಪರ್ಧಿಸದಂತೆ ಮತ್ತು ಸರ್ಕಾರಿ ಉದ್ಯೋಗಕ್ಕೆ ಸೇರುವುದನ್ನು ನಿರ್ಬಂಧಿಸುವ ಕಠಿಣ ಕಾನೂನು ಜಾರಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ.

ಪ್ರಸ್ತಾವಿತ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡಿನ ಪ್ರಕಾರ, ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದರಿಂದ, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಥವಾ ಬಡ್ತಿ ಪಡೆಯುವುದನ್ನು ಮತ್ತು ಯಾವುದೇ ರೀತಿಯ ಸರ್ಕಾರಿ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುತ್ತದೆ.

ಉತ್ತರ ಪ್ರದೇಶ ರಾಜ್ಯದ ಕಾನೂನು ಆಯೋಗ (ಯುಪಿಎಸ್ಎಲ್‌ಸಿ) ಹೇಳುವಂತೆ ಈ ನಿಯಮಗಳು ಉತ್ತರಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ, 2021 ಎಂಬ ಕರಡಿನ ಭಾಗವಾಗಿವೆ.

‘ರಾಜ್ಯ ಕಾನೂನು ಆಯೋಗವು ರಾಜ್ಯದ ಜನಸಂಖ್ಯೆಯ ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಕರಡು ಮಸೂದೆಯನ್ನು ಸಿದ್ಧಪಡಿಸಿದೆ’ ಎಂದು ಯುಪಿಎಸ್ಎಲ್‌ಸಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರಡು ಮಸೂದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಜುಲೈ 19 ಕೊನೆಯ ದಿನವಾಗಿದೆ.

ಎರಡು ಮಕ್ಕಳ ಯೋಜನೆ ಅಳವಡಿಸಿಕೊಳ್ಳುವ ಸರ್ಕಾರಿ ನೌಕರರು ಇಡೀ ಸೇವೆಯ ಸಮಯದಲ್ಲಿ ಎರಡು ಹೆಚ್ಚುವರಿ ಇನ್‌ಕ್ರಿಮೆಂಟ್ ಪಡೆಯುತ್ತಾರೆ. ಇದರ ಜೊತೆಗೆ, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಉದ್ಯೋಗದಾತರ ಕೊಡುಗೆ ನಿಧಿಯಲ್ಲಿ ಮೂರು ಶೇ. 3ರಷ್ಟು ಹೆಚ್ಚಳ ಮತ್ತು ಪೂರ್ಣ ಸಂಬಳದೊಂದಿಗೆ 12 ತಿಂಗಳ ಮಾತೃತ್ವ ಮತ್ತು ಪಿತೃತ್ವ ರಜೆ. ಮುಂತಾದ ಪ್ರಸ್ತಾಪಗಳು ಈ ಕರಡು ಮಸೂದೆಯಲ್ಲಿವೆ.

Exit mobile version