ಅನಗತ್ಯ ಸಿಟಿ ಸ್ಕ್ಯಾನ್ ಬೇಡ: ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ನೂತನ ಮಾರ್ಗಸೂಚಿ

ನವದೆಹಲಿ, ಜೂ. 07: ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಹೆಚ್​​ಎಸ್) ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರನ್ವಯ ಕೊರೊನಾ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿ ಔಷಧ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಜತೆಗೆ, ಸಾಧಾರಣ ಕೊರೊನಾ ಲಕ್ಷಣ ಇರುವ ರೋಗಿಗಳಿಗೆ ಪ್ಯಾರಾಸಿಟಮಾಲ್, ಕಫ್ ಸಿರಪ್ ಮಾತ್ರ ನೀಡಬೇಕು ಇದನ್ನು ಹೊರತುಪಡಿಸಿ ಬೇರೆ ಯಾವ ಔಷಧವನ್ನೂ ನೀಡುವಂತಿಲ್ಲ ಎಂಬುದನ್ನೂ ತಿಳಿಸಲಾಗಿದೆ.

ಕೊರೊನಾ ಸೋಂಕು ದೃಢಪಟ್ಟ ನಂತರ ಚಿಕಿತ್ಸೆ ನೀಡುವಲ್ಲಿ ನಿರ್ದಿಷ್ಟ ಕ್ರಮವನ್ನೇ ಅನುಸರಿಸಬೇಕು. HCQ ಮಾತ್ರೆ, ಫವಿಪಿರವಿರ್, ಐವರ್​ಮೆಕ್ಟಿನ್, ಜಿಂಕ್, ಡಾಕ್ಸಿಸೈಕ್ಲಿನ್, ಪ್ಲಾಸ್ಮಾ ಥೆರಪಿ ನೀಡಬಾರದು. ಗಂಭೀರ ಅನಾರೋಗ್ಯದ ಸ್ಥಿತಿಯಲ್ಲಿದ್ದರೆ ಆಕ್ಸಿಜನ್, ಸ್ಟಿರಾಯ್ಡ್, ಟೊಸಿಲಿಜುಂಬ್ ನೀಡಬೇಕು. ಸಾಧಾರಣ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ಕೊಮಾರ್ಬಿಡಿಟಿ (ಬಹು ಆರೋಗ್ಯ ಸಮಸ್ಯೆ) ನಿಯಂತ್ರಿಸುವುದಕ್ಕೆ ಆದ್ಯತೆ ನೀಡಬೇಕು. ಅಂತಹವರಿಗೆ ಆಕ್ಸಿಜನ್ ನೀಡಿ ಕೊಮಾರ್ಬಿಡಿಟಿ ನಿಯಂತ್ರಿಸಬೇಕು ಎಂದು ಸೂಚಿಸಲಾಗಿದೆ.

ಇದೆಲ್ಲದರ ಜತೆಗೆ ಆಸ್ಪತ್ರೆಗೆ ಸಮಿತಿ ನೇಮಕದ ಅಗತ್ಯ ಇದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ಅನಗತ್ಯವಾಗಿ, CT ಸ್ಕ್ಯಾನ್, HRCT ಮಾಡಬಾರದು. ರೆಮ್​ಡಿಸಿವಿರ್ ಬಳಕೆಯಲ್ಲೂ ಎಚ್ಚರಿಕೆ ಅಗತ್ಯ. ಹೈಪೊಕ್ಸಿ ರೋಗಿಗಳಿಗೆ ಡೆಕ್ಸಾ ಮಾತ್ರೆಯನ್ನ ದಿನಕ್ಕೆ 6 ಎಂಜಿಯಂತೆ 10 ದಿನ ನೀಡಬೇಕು ಎಂಬುದನ್ನು ನೂತನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version