ಓ ದೇವರೇ …! ಇಂಥಾ ದಸರಾ ಮುಂದೆಂದೂ ಬರಬಾರದು

ನವರಾತ್ರಿ ಎಂದರೆ ಏನೋ ಖುಷಿ, ಏನೋ ಸಂಭ್ರಮ. ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಒಂಭತ್ತು ದಿನಗಳ ಕಾಲ ದುರ್ಗೆಯು ನಾನಾ ಅವತಾರಗಳನ್ನೆತ್ತಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಠರನ್ನು ರಕ್ಷಿಸಿದ ಮಾತೆಯಾಗಿ ಷೋಡಶೋಪಚಾರಗಳ ಮೂಲಕ ವ್ರತ ಉಪಾಸನೆಗಳಿಂದ ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬವೆಂದರೆ ಎಲ್ಲೆಲ್ಲೂ ಸಂಭ್ರಮ ಸಡಗರ ಮನೆಮಾಡಿರುತ್ತದೆ. ಹೊಸ ಉಡುಪುಗಳನ್ನು ಧರಿಸುವುದು, ಸಂಭ್ರಮದಿಂದ ರೆಡಿಯಾಗಿ ಸಂಬಂಧಿಕರ ಮನೆಗಳಲ್ಲಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವುದು, ದೇವಸ್ಥಾನಗಳನ್ನು ಭೇಟಿ ಮಾಡುವುದು, ಹರಕೆ ಪೂಜೆಗಳನ್ನು ಸಲ್ಲಿಸುವುದು. ಹೀಗೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಪ್ರತಿವರ್ಷವು ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿ, ಹೊಸ ಉಡುಪುಗಳ ಖರೀದಿ, ಹೂವಿನ ಮಾರಾಟ, ಗೊಂಬೆಗಳ ಮಾರಾಟದ ಭರಾಟೆ ಜೋರಾಗಿಯೇ ಇರುತ್ತದೆ. ಆದರೆ ಈ  ವರ್ಷ ಮಾಹಾಮಾರಿ ಕೊರೊನಾ ಎಲ್ಲಡೆ ಹರಡಿಕೊಂಡಿರುವುದರಿಂದ ಹಬ್ಬದ ಸಂಭ್ರಮಕ್ಕೂ ಅಡ್ಡಿಯುಂಟಾಗಿದೆ. ಅನೇಕ ನಿರ್ಬಂಧಗಳೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದ್ದರಿಂದ ಈ ವರ್ಷ ವ್ಯಾಪಾರ ವಹಿವಾಟುಗಳು ಕಳೆಗುಂದಿದೆ ಎಂದರೆ ತಪ್ಪಾಗಲಾರದು.

ಲಾಕ್‌ಡೌನ್‌ ಸಂಪೂರ್ಣ ಸಡಿಲಗೊಳಿಸಿದ ಬಳಿಕ ಬರುತ್ತಿರುವ ವಿಜೃಂಭಣೆಯಿಂದ ಸುದೀರ್ಘ ಕಾಲದವರೆಗೂ ಆಚರಿಸುವ ಹಬ್ಬ ನವರಾತ್ರಿ. ವ್ಯಾಪಾರಸ್ಥರಿಗೆ ಖುಷಿ ಮನೆ ಮಾಡಿತ್ತು ಆದರೆ ಅವರ ನಿರೀಕ್ಷೆ ಮಣ್ಣು ಪಾಲಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ ಗ್ರಾಹಕರು ಇಲ್ಲದೇ ವ್ಯಾಪಾರ ವಹಿವಾಟುಗಳು ಕಳೆಗುಂದಿದೆ.  ನವರಾತ್ರಿಯನ್ನು ವಿಶೇಷವಾಗಿ ಗೊಂಬೆಗಳನ್ನಿಟ್ಟು ಆಚರಿಸುವ ಹಬ್ಬ. ಪ್ರತಿವರ್ಷ ಗೊಂಬೆಗಳ ಖರೀದಿ ಜೋರಾಗಿಯೇ ನಡೆಯುತ್ತದೆ. ಆದರೆ ಈ ವರ್ಷ ಗೊಂಬೆಗಳ ವ್ಯಾಪಾರ ಪಾತಾಳಕ್ಕೆ ಇಳಿದಿದೆ. ನಿರೀಕ್ಷೆಯಂತೆ ಗೊಂಬೆಗಳ ಖರೀದಿ ಇಲ್ಲದೇ ವ್ಯಾಪಾರಸ್ಥರು ಗೊಂಬೆಗಳ ಖರೀದಿಗೆ ಅಂಗಡಿಯ ಮುಂದೆ ಸುಮ್ಮನೆ ಕೂರುವಂತಾಗಿದೆ. ಇದು ಗೊಂಬೆ ವ್ಯಾಪಾರಿಗಳ ಸ್ಥಿತಿ.

ಜನರು ಮನೆಯಲ್ಲಿಯೇ ಸರಳವಾಗಿ ಈ ಹಬ್ಬವನ್ನು ಆಚರಿಸುತ್ತಿದ್ದರೂ, ಯಾವುದೇ ಪೂಜೆಗಳು ಹಬ್ಬಗಳ ಸಂದರ್ಭದಲ್ಲಿ ಹೂವು ಅಗತ್ಯ ವಸ್ತು. ಹೂವಿಲ್ಲದೇ ಹಬ್ಬ ಆಚರಿಸುವುದೇ ಇಲ್ಲ. ಹಬ್ಬ ಎಂದರೆ ಹೂವು ಖರೀದಿಗೆ ಜನಮುಗಿ ಬಿಳುವುದು ಸಹಜ. ಆದರೆ ಈ ವರ್ಷ ಹೂವಿನ ಮಾರಾಟವು ಕಳೆಗುಂದಿದೆ. ಮುಖ್ಯ ಕಾರಣ, ಕೊರೊನಾ. ಸರಳಾ ದಸರಾದಿಂದ ಹೂವಿನ ಖರೀದಿಯಿಂದಲೂ ಜನ ಹಿಂದುಳಿದಿದ್ದಾರೆ. ಅದರ ಜತೆಗೆ ಅತಿವೃಷ್ಟಿಯಾಗಿರುವುದರಿಂದ ಹೂವಿನ ಕೃಷಿಗೆ ಸಮಸ್ಯೆ ಉಂಟಾಗಿದ್ದು, ಹೂವಿನ ಬೆಲೆ ಗನಕ್ಕೇರಿದೆ. ಆದ್ದರಿಂದ ಗ್ರಾಹಕರು ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ.

ಪ್ರಮುಖವಾಗಿ ಆಚರಿಸುವ ದೇವಸ್ಥಾನಗಳ ಹೊರತಾಗಿ, ಬೇರೆಲ್ಲಿಯೂ ವಿಜೃಂಭಣೆಯ ದಸರಾ ಅಥವಾ ನವರಾತ್ರಿಯ ಸಂಭ್ರಮ ಸಡಗರ ಎಲ್ಲಿಯೂ ಕಾಣಿಸದೇ ಇರುವುದು ವಿಪರ್ಯಾಸ ಹಾಗೂ ಬೇಸರದ ಸಂಗತಿ. ಈ ಹಬ್ಬವೇ ಇಷ್ಟು ಕಳೆಗುಂದಿದೆ. ಇನ್ನು ಸ್ವಲ್ಪವೇ ದಿನಗಳಲ್ಲಿ ದೀಪಾವಳಿಯೂ ಬರಲಿದ್ದು, ಆ ಹಬ್ಬವೂ ನೀರಸವಾಗಿ ಆಚರಣೆಯಾಗುತ್ತದೆಯೇ ಎಂಬುದು ಪ್ರಶ್ನಾತೀತವಾಗಿ ಉಳಿದಿದೆ. 

-ಶರಧಿ ಆರ್‌. ಫಡ್ಕೆ

Exit mobile version